ಯದುವೀರ್ ವಿರುದ್ಧ ತುಟಿ ಬಿಚ್ಚಬೇಡಿ: ‘ಕೈ’ ನಾಯಕರಿಗೆ ಸಿಎಂ ಎಚ್ಚರಿಕೆ

– ಬಿಜೆಪಿ ವಿರುದ್ಧ ಮಾತಾಡಿ, ಯದುವೀರ್‌ರನ್ನು ಟೀಕಿಸಲು ಮುಂದಾಗಬೇಡಿ ಎಂದ ಸಿದ್ದರಾಮಯ್ಯ

ಮೈಸೂರು: ಯದುವೀರ್ ವಿರುದ್ಧ ತುಟಿ ಬಿಚ್ಚಬೇಡಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಾಜವಂಶಸ್ಥನ ಕುರಿತು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ಮೈಸೂರಿನಲ್ಲಿ ಸ್ಥಳೀಯ ನಾಯಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಸಭೆಯಲ್ಲಿ, ಬಿಜೆಪಿ ವಿರುದ್ಧ ಮಾತಾಡಿ. ಆದರೆ ಯದುವೀರ್‌ರನ್ನು ಯಾವುದೇ ಕಾರಣಕ್ಕೂ ಟೀಕಿಸಲು ಮುಂದಾಗಬೇಡಿ. ಯದುವಂಶದ ವಿಚಾರ ಮೈಸೂರು ಭಾಗದಲ್ಲಿ ಭಾವನಾತ್ಮಕವಾಗಿದೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೈಸೂರಿನಿಂದ ಲಕ್ಷ್ಮಣ್‌, ಚಾಮರಾಜನಗರದಿಂದ ಹೆಚ್.ಸಿ.ಮಹದೇವಪ್ಪ ಪುತ್ರನಿಗೆ ʼಕೈʼ ಟಿಕೆಟ್ ಫೈನಲ್?

ಸ್ವಲ್ಪ ಹೆಚ್ಚು ಕಡಿಮೆ ಆದರೂ ನಮ್ಮ ಮಾತೇ ನಮಗೆ ಮುಳ್ಳಾಗುತ್ತೆ. ಸರ್ಕಾರದ ಗ್ಯಾರಂಟಿಗಳು, ಬಿಜೆಪಿ ಸುಳ್ಳುಗಳ ಮೇಲೆ ಪ್ರಚಾರ ಮಾಡಿ. ಯದುವೀರ್ ವಿಚಾರಕ್ಕೆ ಅಪ್ಪಿತಪ್ಪಿಯೂ ಹೋಗಬೇಡಿ. ಯದುವೀರ್ ವಿಚಾರದಲ್ಲಿ ಟೀಕೆ ಮಾಡಿದರೆ ಅದರ ಎಫೆಕ್ಟ್ ಮೈಸೂರು ಮಾತ್ರವಲ್ಲ ಬೇರೆ ಕ್ಷೇತ್ರದ ಮೇಲೂ ಆಗುತ್ತೆ ಎಚ್ಚರ ಇರಲಿ ಎಂದು ತಿಳಿಸಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಈ ಬಾರಿ ಬಿಜೆಪಿ ಯದುವೀರ್ ಒಡೆಯರ್ ಅವರಿಗೆ ನೀಡಿದೆ. ಕ್ಷೇತ್ರದಲ್ಲಿ ಎರಡು ಬಾರಿ ಜಯಗಳಿಸಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿಯ ಟಿಕೆಟ್ ಮಿಸ್ ಆಗಿದೆ. ಇದನ್ನೂ ಓದಿ: ಈಶ್ವರಪ್ಪ ಹಿರಿಯ ನಾಯಕರು, ಅವರ ಮನವೊಲಿಸುತ್ತೇವೆ: ಪ್ರಹ್ಲಾದ್ ಜೋಶಿ

ಯದುವೀರ್ ವಿರುದ್ಧ ಮೈಸೂರಿಗೆ ಯಾರನ್ನು ಅಭ್ಯರ್ಥಿ ಮಾಡುವುದು ಎಂಬ ಗೊಂದಲ ಕಾಂಗ್ರೆಸ್‌ನಲ್ಲಿ ಇನ್ನೂ ಮುಂದುವರಿದಂತೆ ಇತ್ತು. ಟಿಕೆಟ್ ಅಂತಿಮಗೊಳಿಸಲು ಶುಕ್ರವಾರ ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದಿದ್ದರು. ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೈಸೂರಿನಿಂದ ಲಕ್ಷ್ಮಣ್‌ ಹಾಗೂ ಚಾ.ನಗರದಿಂದ ಸುನೀಲ್ ಬೋಸ್ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.