ಸಿಜೆಐ ಮೇಲೆ ಶೂ ಎಸೆದವರು ಸನಾತನವಾದಿಗಳು, ಮನುವಾದಿಗಳು: ಸಿದ್ದರಾಮಯ್ಯ

ಬೆಂಗಳೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ (CJI BR Gavai) ಮೇಲೆ ಶೂ ಎಸೆದವರು ಸನಾತನವಾದಿಗಳು, ಮನುವಾದಿಗಳು ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತಾನಾಡಿದ ಅವರು, ಶೂ ಎಸೆದ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿ ಅವರೇ ಕ್ಷಮಿಸಿದ್ದಾರೆ. ಶೂ ಎಸೆಯೋ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಮನುವಾದಿಗಳ ಪ್ರಯತ್ನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳಲ್ಲ, ಶೂ ಎಸೆಯಲು ದೇವರೇ ಪ್ರಚೋದಿಸಿದ್ದಾನೆ: ವಕೀಲ ರಾಕೇಶ್‌ ಕಿಶೋರ್‌

ಸಿಜೆ ಅವರು ಶೂ ಎಸೆತಕ್ಕೆ ವಿಚಲಿತ ಆಗಿಲ್ಲ. ಅವರ ಕೆಲಸ ಅವರು ಮಾಡಿದ್ದಾರೆ. ಅವರು ಕ್ಷಮಿಸಿದ್ದಾರೆ. ಅದು ಅವರ ದೊಡ್ಡ ಗುಣ. ಇದು ಸನಾತನವಾದಿಗಳು, ಮನುವಾದಿಗಳ ಕೆಲಸ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುಪ್ರೀಂ ಸಿಜೆಐ ಮೇಲೆ ಶೂ ಎಸೆದ ವಕೀಲ – ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ; ಮೋದಿ ತೀವ್ರ ಖಂಡನೆ

ಏನಿದು ಘಟನೆ?
ಸುಪ್ರೀಂ ಕೋರ್ಟ್‌ (Supreme Court) ಹಿರಿಯ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಮುಂದಾದ ಘಟನೆ ಸೋಮವಾರ (ಅ.6) ನಡೆದಿತ್ತು. ಮಧ್ಯಪ್ರದೇಶದ ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನಾ. ಬಿ ಆರ್ ಗವಾಯಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಟ್ಟಾಗಿ 71 ವರ್ಷದ ಕಿಶೋರ್‌ ರಾಕೇಶ್‌ ಶೂ ಎಸೆಯಲು ಮುಂದಾಗಿದ್ದರು.

ಕೋರ್ಟ್‌ ಹಾಲ್‌ನಲ್ಲಿ ಕಿಶೋರ್‌ ರಾಕೇಶ್‌ ಶೂ ತೆಗೆಯುತ್ತಿದ್ದಾಗ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ವಕೀಲರನ್ನು ತಡೆದು ಹೊರಗೆ ಕರೆದುಕೊಂಡು ಹೋಗಿದ್ದರು. ಕರೆದುಕೊಂಡು ಹೋಗುವಾಗ ಸನಾತನ ಧರ್ಮಕ್ಕೆ ಅವಮಾನ ಮಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಕೂಗಿಕೊಂಡಿದ್ದರು. ಇದನ್ನೂ ಓದಿ: ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ- ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ