ನಾಲ್ವರು ಮಂತ್ರಿಗಳಿಂದ `ಕೈ’ ಹೈಕಮಾಂಡ್ ಗೆ ಹಣ – ಎಚ್‍ಡಿಕೆ ಹೊಸ ಬಾಂಬ್

ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿರುವ ನಾಲ್ವರು ಮಂತ್ರಿಗಳು ಹೈಕಮಾಂಡ್ ಗೆ ಹಣ ನೀಡುತ್ತಿದ್ದು, ಈ ಕುರಿತು ದಾಖಲೆ ಸಮೇತ ಅವರ ಹೆಸರುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಜಿಲ್ಲೆಯ ಶಹಾಪುರದ ಜೆಡಿಎಸ್ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ವರು ಮಂತ್ರಿಗಳು ಸಿಎಂಗೆ ಆಪ್ತರಾಗಿದ್ದಾರೆ. ನವದೆಹಲಿಗೆ ತೆರಳಲು ಇವರಿಗೆ ವಿಶೇಷ ವಿಮಾನವೇ ಏಕೆ ಬೇಕು? ಅದರಲ್ಲಿಯೇ ಹಣ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಹೈಕಮಾಂಡ್ ಗೆ ಕಪ್ಪ ಹಣ ಸಲ್ಲಿಕೆ ಆಗುತ್ತದೆ. ಇದನ್ನು ಕೆಲ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಗಣಿ ಹಗರಣದ ಬಗ್ಗೆ ಸಿಎಂ ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲ ಏಕೆ?. ಎಂಎಂಸಿಎಲ್ ನಲ್ಲಿ ನಡೆದ ಐದು ಸಾವಿರ ಕೋಟಿ ರೂ. ಗಣಿ ಹಗರಣವನ್ನು ಗಣಿ ಸಚಿವರು ಲೆಕ್ಕ ಮಾಡುವುದರಲ್ಲಿ ತಪ್ಪಾಗಿದೆ ಎಂದಿರುವುದು ಬಾಲಿಷತನ ಹೇಳಿಕೆ ಎಂದರು.

ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ವರ್ಷ ಅಧಿಕಾರದಲ್ಲಿ ಸುಮ್ಮನೇ ಕುಳಿತು ಇದೀಗ ಜನರ ಮುಂದೆ ಸಾಧನಾ ಸಮಾವೇಶ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂ. ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಆದರೆ ಈ ಯೋಜನೆಗಳಿಗೆ ಹಣಕಾಸಿನ ಇಲಾಖೆ ಬಗ್ಗೆ ಒಪ್ಪಿಗೆ ಪಡೆದಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿರುವ ಯೋಜನೆಗಳಲ್ಲಿ ಕೆಲವು ಅನಾವಶ್ಯಕ ಇದ್ದರೆ ರದ್ದುಗೊಳಿಸಲಾಗುವುದು. ಹಣ ಲೂಟಿ ಮಾಡಲು ಕೆಲವೊಂದು ಯೋಜನೆಗಳಲ್ಲಿ ಘೋಷಣೆ ಮಾಡಲಾಗಿದೆ. ಇದನ್ನು ರದ್ದು ಮಾಡಿ ಆ ಹಣವನ್ನು ಸಮರ್ಪಕವಾಗಿ ವಿನಿಯೋಗಿಸಲು ಪ್ರತ್ಯೇಕವಾಗಿ ವಿಭಾಗ ಮಾಡುತ್ತೇವೆ ಎಂದರು.

ಇದೇ ವೆಳೆ ಗೋವಿಂದರಾಜು ಮನೆ ಮೇಲೆ ಐಟಿ ದಾಳಿ ಮಾಡಿದ ವೇಳೆ ಸಿಕ್ಕ ಡೈರಿ ಸೋರಿಕೆ ಮಾಡಿ ಬಿಜೆಪಿ ನಾಯಕರು ಲಾಭ ಮಾಡಿಕೊಂಡರು. ಆ ತನಿಖೆ ಎಲ್ಲಿಗೆ ಬಂತು ಎಂಬುದು ಇದುವರೆಗೂ ಮಾಹಿತಿ ಇಲ್ಲ. ಲೇಖಾನುದಾನ ಬಜೆಟ್ ಮಂಡನೆ ಮಾಡಲು ಸಿಎಂ ಅವರು ಎಲ್ಲ ಸಂಘ ಸಂಸ್ಥೆಗಳನ್ನು ಕರೆದು ಅಭಿಪ್ರಾಯ ಪಡೆಯುತ್ತಾರೆ. ಈ ಮುಂಚೆ ಮಂಡಿಸಿದಾಗ ಯಾವುದೇ ಸಭೆ ಕರೆದಿಲ್ಲ. ಜನರನ್ನು ಮೆಚ್ಚಿಸಲು ನಾಟಕೀಯ ವಾತಾವರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *