ಪಾಕ್‌ ವಿರುದ್ಧ ಗೆದ್ದ ಭಾರತಕ್ಕೆ ಏಷ್ಯಾ ಕಪ್‌ – ಸಿದ್ದರಾಮಯ್ಯ, ಹೆಚ್‌ಡಿಕೆ ಅಭಿನಂದನೆ

ಬೆಂಗಳೂರು: ದುಬೈನಲ್ಲಿ ನಡೆದ ಏಷ್ಯಾ ಕಪ್‌ 2025 ಟೂರ್ನಿಯ ಹೈವೋಲ್ಟೋಜ್‌ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿ ‘ಏಷ್ಯಾ’ ಚಾಂಪಿಯನ್‌ ಆಗಿ ಹೊರಹೊಮ್ಮಿದ ಭಾರತ ತಂಡಕ್ಕೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

ಭಾರತ ತಂಡಕ್ಕೆ ಅದ್ಭುತ ಗೆಲುವು! ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ಟೀಮ್ ಇಂಡಿಯಾಗೆ ಅಭಿನಂದನೆಗಳು. ನಿಮ್ಮ ದೃಢನಿಶ್ಚಯ ಮತ್ತು ತಂಡದ ಕೆಲಸವು ಮತ್ತೊಮ್ಮೆ 140 ಕೋಟಿ ಭಾರತೀಯರ ಉತ್ಸಾಹವನ್ನು ಹೆಚ್ಚಿಸಿದೆ. ಈ ಗೆಲುವು ನಮ್ಮ ರಾಷ್ಟ್ರದ ಅಚಲ ಹೆಮ್ಮೆಗೆ ಸಾಕ್ಷಿಯಾಗಿದೆ. ಜೈ ಹಿಂದ್ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ.

2025ರ ಏಷ್ಯಾ ಕಪ್ ಗೆದ್ದ ಟೀಮ್ ಇಂಡಿಯಾಗೆ ಹೃದಯಪೂರ್ವಕ ಅಭಿನಂದನೆಗಳು. ಈ ವಿಜಯವು ತಂಡದ ದೃಢತೆ, ಏಕತೆ ಮತ್ತು ಅದ್ಭುತ ಕ್ರೀಡಾಸ್ಫೂರ್ತಿಗೆ ನಿದರ್ಶನ. ಪ್ರತೀ ಭಾರತೀಯನಿಗೂ ಹೆಮ್ಮೆಯ ಕ್ಷಣ ಇದಾಗಿದೆ. ಈ ಗೆಲುವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಉಜ್ವಲ ಅಧ್ಯಾಯವಾಗಿದೆ. ಜೈ ಹಿಂದ್ ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಸೂರ್ಯ ಬಳಗಕ್ಕೆ ಅಭಿನಂದನೆ ತಿಳಿಸಿದ್ದಾರೆ.

41 ವರ್ಷಗಳ ಏಷ್ಯ ಕಪ್ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಇಂಡಿಯಾ-ಪಾಕ್ ಫೈನಲ್‌ನಲ್ಲಿ ಸೆಣಸಿದವು. ಫೈನಲ್‌ನಲ್ಲಿ ಭಾರತ ರೋಚಕ ಜಯಗಳಿಸಿ ಏಷ್ಯಾ ಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಏಷ್ಯಾ ಕಪ್ 2025ರ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಪಾಕ್ ವಿರುದ್ಧ ಆಡಿದ ಮೂರು ಪಂದ್ಯಗಳನ್ನೂ ಜಯಸಿ ಭಾರತ ಹ್ಯಾಟ್ರಿಕ್‌ ಸಾಧನೆ ಮಾಡಿದೆ.