ತುಂಗಭದ್ರಾ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

– 19ನೇ ಕ್ರಸ್ಟ್‌ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಸಿದವರಿಗೆ ಸನ್ಮಾನ
– ಬಾಗಿನ ಕಾರ್ಯಕ್ರಮದಲ್ಲಿ ಅಸಮಾಧಾನ; ಸ್ಥಳೀಯ ಶಾಸಕ ಗೈರು

ಬಳ್ಳಾರಿ: ಮೂರನೇ ಬಾರಿಗೆ ತುಂಬಿದ ತುಂಗಭದ್ರಾ ಜಲಾಶಯಕ್ಕೆ (TB Dam) ಇಂದು ಬಾಗಿನ ಅರ್ಪಿಸಲಾಯಿತು. ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆ ಸಿಎಂ, ಡಿಸಿಎಂ ಸೇರಿ ಇಡೀ ಸರ್ಕಾರವೇ ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಬಂದಿತ್ತು. ಸೇತುವೆ ಮೇಲೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ, ತುಂಗಭದ್ರೆಗೆ ಕಳಶದ ನೀರು ಸಮರ್ಪಣೆ ಮಾಡಿದರು. ಬಳಿಕ ಬಾಗಿನ ಅರ್ಪಿಸಿದರು.

ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಪೊಲೀಸ್ ಪಡೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar), ಸಚಿವರಾದ ಜಮೀರ್ ಅಹಮ್ಮದ್, ಶಿವರಾಜ್ ತಂಗಡಗಿ, ಶರಣಪ್ರಕಾಶ್ ಪಾಟೀಲ್ ಸಾಥ್ ನೀಡಿದರು. ಬಳ್ಳಾರಿ ಸಂಸದ ತುಕಾರಾಂ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಸೇರಿದಂತೆ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು ಬಾಗಿನ ಅರ್ಪಣೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ತಜ್ಞರ ವರದಿಯ ಆಧಾರದ ಮೇಲೆ ಟಿಬಿ ಡ್ಯಾಂ ಗೇಟ್‌ಗಳ ನಿರ್ವಹಣೆ: ಸಿಎಂ ಸಿದ್ದರಾಮಯ್ಯ

ಇದಕ್ಕೂ ಮೊದಲು ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ ತಮ್ಮ ಬೆಂಬಲಿಗರ ಜೊತೆಗೆ ತುಂಗಭದ್ರಾ ಡ್ಯಾಂನ ಮುಖ್ಯ ಗೇಟ್ ಹತ್ತಿರ ಬಂದಿದ್ದರು. ಆಗ ಶಾಸಕರ ಬೆಂಬಲಿಗರನ್ನ ಒಳಗಡೆ ಬಿಡದೇ ಪೊಲೀಸರು ತಡೆದರು. ಆಗ ರೊಚ್ಚಿಗೆದ್ದ ಶಾಸಕ ಪೊಲೀಸರ ಜೊತೆಗೆ ವಾಗ್ವಾದಕ್ಕೆ ಇಳಿದರು. ಅಷ್ಟೇ ಅಲ್ಲದೇ, ಸಿಎಂ ಸಿದ್ದರಾಮಯ್ಯ ತುಂಗಭದ್ರಾ ಡ್ಯಾಂ ಎಂಟ್ರಿ ಗೇಟ್ ಬಳಿಯೇ ಭೇಟಿ ಮಾಡಿದ್ದರು. ಅದಾದ ಬಳಿಕ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಗೈರಾದರು.

ಮಲೆನಾಡು ಭಾಗದಲ್ಲಿ ಮೇಘಸ್ಪೋಟದಿಂದ ತುಂಗಭದ್ರಾ ಜಲಾಶಯ ಈ ಬಾರಿ ಮೂರು ಸಲ ಭರ್ತಿ ಆಗಿದೆ. ಮೊದಲ ಬಾರಿ ಭರ್ತಿ ಆದಾಗ ಲಕ್ಷಾಂತರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರಿಂದ ಆ.13ಕ್ಕೆ ಬಾಗಿನ ಕಾರ್ಯಕ್ರಮ ನಿಗದಿ ಆಗಿದ್ದರಿಂದ ಜಲಾಶಯವನ್ನ ಸಂಪೂರ್ಣ ಭರ್ತಿ ಮಾಡಲಾಗಿತ್ತು. ಆದರೆ, ಆ.10ಕ್ಕೆ ಜಲಾಶಯಕ್ಕೆ ಸಂಕಷ್ಟ ಬಂದೊದಗಿತ್ತು. ಅಂದು ರಾತ್ರಿ 19ನೇ ಕ್ರಸ್ಟ್‌ ಗೇಟ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನದಿ ಪಾಲಾಗಿತ್ತು. ಅಂದಾಜು 40 ಟಿಎಂಸಿ ನೀರು ವ್ಯರ್ಥವಾಗಿ ನದಿಗೆ ಹರಿದಿತ್ತು. ಇದು ಜಲಾಶಯ ನಂಬಿಕೊಂಡಿದ್ದ ಅನ್ನದಾತರು, ಕುಡಿಯೋ ನೀರಿಗೆ ಭರಸಿಡಿಲು ಬಂದಂತಾಗಿತ್ತು. ಹೀಗಾಗಿ ಇಂದಿನ ಕಾರ್ಯಕ್ರಮದಲ್ಲಿ ಕ್ರಸ್ಟ್‌ ಗೇಟ್ ಕೂಡಿಸಿದ ತಂತ್ರಜ್ಞರನ್ನ ಸನ್ಮಾನಿಸಲಾಯಿತು. ಇದನ್ನೂ ಓದಿ: ದಸರಾ ಆನೆಗಳ ಮುಂದೆ ಫೋಟೊ, ಸೆಲ್ಫಿ ತೆಗೆದುಕೊಳ್ಳುವವರಿಗೆ ಕಡಿವಾಣ ಹಾಕಬೇಕು: ಯದುವೀರ್