-6 ತಿಂಗಳಲ್ಲಿ 28 ಕೋಟಿ ಬಳಕೆ
ಬೆಂಗಳೂರು: ಮುಖ್ಯಮತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾನವೀಯತೆಯಲ್ಲಿ ರಾಜ್ಯದ ಟಾಪ್ ಸಿಎಂ ಆಗಿದ್ದು, ಸಿಎಂ ಪರಿಹಾರ ನಿಧಿಯಿಂದ ದಾಖಲೆಯ ಸಹಾಯ ಮಾಡಿದ್ದಾರೆ.
ರಾಜಕೀಯದಲ್ಲಿ ಸಿಎಂ ಕುಮಾರಸ್ವಾಮಿ ಅವರದ್ದು, ತಂತ್ರ-ಪ್ರತಿತಂತ್ರ ರಾಜಕಾರಣ ಇರಬಹುದು. ಆದರೆ ಮಾನವೀಯತೆಯಲ್ಲಿ ಮಾತ್ರ ಕುಮಾರಸ್ವಾಮಿ ಅಪ್ಪಟ ಚಿನ್ನ ಎಂದರೆ ತಪ್ಪಾಗಲಾರದು. ಕುಮಾರಸ್ವಾಮಿ ಅವರು ಕಷ್ಟ ಅಂತ ಬಂದವರಿಗೆ ಯಾವತ್ತು ಇಲ್ಲ ಅಂದಿಲ್ಲ. ಆರೋಗ್ಯ ಸಮಸ್ಯೆ ಅಂದರೆ ಸಾಕು ಹೇಗಾದರೂ ಮಾಡಿ ಸಹಾಯ ಮಾಡೇ ಮಾಡುತ್ತಾರೆ. ಇಂತಹ ಸಮಸ್ಯೆಗೆ ಸಹಾಯ ಮಾಡಲು ಇರುವ ಮುಖ್ಯಮಂತ್ರಿ ಪರಿಹಾರ ನಿಧಿಯನ್ನ ಸಿಎಂ ಕುಮಾರಸ್ವಾಮಿ ಹಿಂದಿನ ಎಲ್ಲಾ ಸಿಎಂಗಳಿಗಿಂತ ಹೆಚ್ಚು ಉಪಯೋಗಿಸಿದ್ದಾರೆ. ಸಿಎಂ ಆಗಿ 6 ತಿಂಗಳಲ್ಲೇ ಬರೋಬ್ಬರಿ 28 ಕೋಟಿ ಹಣ ಸಹಾಯವನ್ನ ನೊಂದವರಿಗಾಗಿ ಮಾಡಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ ನಿತ್ಯ 100ಕ್ಕೂ ಹೆಚ್ಚು ಅರ್ಜಿಗಳು ಬರುತ್ತವೆ. ಯಾವ ಅರ್ಜಿಗಳನ್ನ ವಾಪಸ್ ಕಳಿಸಿದ ಉದಾಹರಣೆ ಇಲ್ಲ. ಒಂದು ವೇಳೆ ದಾಖಲೆ ಇಲ್ಲದೆ ಇದ್ದರೂ, ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದು ಸಹಾಯ ಮಾಡಿದ ಉದಾಹರಣೆ ಇವೆ. ಹೀಗೆ 6 ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಿಎಂ ಸಹಾಯಕ್ಕೆ ಬಂದಿವೆಯಂತೆ. ಎಲ್ಲರ ಅರ್ಜಿಗಳನ್ನ ಪರಿಶೀಲನೆ ಮಾಡಿ ಸಹಾಯ ಮಾಡಿದ್ದಾರೆ.
ಬೆಂಗಳೂರಿನ ಆಟೋ ಚಾಲಕನ ಮಗಳಿಗೆ ಹೃದಯ ಸಮಸ್ಯೆಗೆ 5 ಲಕ್ಷ, ಬಳ್ಳಾರಿಯ ಬಡ ಕುಟುಂಬದ ಇಬ್ಬರು ಮಕ್ಕಳಿಗೆ ಬೋನ್ ಮ್ಯಾರೋ ಸಮಸ್ಯೆಗೆ 10 ಲಕ್ಷ, ಕಲಬುರ್ಗಿಯ ಯುವಕನೊಬ್ಬನಿಗೆ ಕೈಕಾಲು ಸ್ವಾಧೀನ ಇಲ್ಲದ ವ್ಯಕ್ತಿಗೆ 2 ಲಕ್ಷ ಹೀಗೆ ನೂರಾರು ಜನರಿಗೆ ಸಿಎಂ ಸಹಾಯ ಮಾಡಿದ್ದಾರೆ.

ರಾಜಕೀಯದ ಕುಸ್ತಿಗಳು ಏನೇ ಇರಲಿ. ರಾಜಕೀಯ ಬಿಟ್ಟರೆ ಸಿಎಂ ಕುಮಾರಸ್ವಾಮಿ ಮಾನವೀಯತೆಯಲ್ಲಿ ಯಾವತ್ತು ದೊಡ್ಡವರೇ. ಈ ಸಹಾಯದ ಮಾನವೀಯತೆ ಮನಸ್ಸು ಹೀಗೆ ಮುಂದುವರೆಯಲಿ ಅನ್ನೋದು ಎಲ್ಲರ ಆಶಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply