ಖರ್ಗೆಗೆ ಸಿಎಂ ಪೋಸ್ಟ್ – ಸಿದ್ದರಾಮಯ್ಯ ಟಾಂಗಿಗೆ ಸಿಎಂ ತಿರುಗೇಟು

ಬೆಂಗಳೂರು: ಸಿಎಂ ಹುದ್ದೆ ವಿಚಾರದಲ್ಲಿ ಖರ್ಗೆ ಪರ ಬ್ಯಾಟ್ ಬೀಸಿದ್ದ ಎಚ್‍ಡಿಕೆಗೆ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದರು. ಕೇವಲ ಕಾಂಗ್ರೆಸ್‍ನಲ್ಲಿ ಮಾತ್ರವಲ್ಲ ಜೆಡಿಎಸ್ ನಲ್ಲಿಯೂ ಸಿಎಂ ಅರ್ಹ ವ್ಯಕ್ತಿಗಳಿದ್ದಾರೆ. ಸಚಿವ ಹೆಚ್.ಡಿ.ರೇವಣ್ಣ ಸಹ ಸಿಎಂ ಅರ್ಹತೆಯ ವ್ಯಕ್ತಿ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದರು. ಮಾಧ್ಯಮಗಳ ಮೇಲೆ ಮುನಿಸಿಕೊಂಡು ದೂರವಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯರಿಗೆ ಉತ್ತರ ನೀಡಿದ್ದಾರೆ.

ಹೆಚ್‍ಡಿಕೆ ಟ್ವೀಟ್: ನಾಡಿನ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು. ಈ ಹೇಳಿಕೆಗೆ ರಾಜಕೀಯದ ಬಣ್ಣಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ. ಈ ಹೇಳಿಕೆಯ ಮೂಲಕ ರಾಜಕೀಯ ಲಾಭ ಪಡೆಯುವ ಕೀಳು ಅಭಿರುಚಿ ನನ್ನದಲ್ಲ. ಖರ್ಗೆಯವರದು ಪಕ್ಷ, ಜಾತಿ ಎಲ್ಲವನ್ನೂ ಮೀರಿದ ಮಹೋನ್ನತ ವ್ಯಕ್ತಿತ್ವ ಎನ್ನುವುದನ್ನು ನಾವು ಮರೆಯಬಾರದು.

ಸಿದ್ದರಾಮಯ್ಯ ಟ್ವೀಟ್: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಬರೆದುಕೊಂಡಿದ್ದಾರೆ.

ಹಾಸನದ ಹೊಳೆನರಸೀಪುರದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಡಿ.ರೇವಣ್ಣ, ಸಿದ್ದರಾಮಯ್ಯರಿಗೆ ನನ್ನ ಮೇಲೆ ಅಭಿಮಾನವಿದೆ ಮತ್ತು ಒಲವಿದೆ. ಆದ್ರೆ ಸಿಎಂ ಸ್ಥಾನ ಸದ್ಯ ಖಾಲಿ ಇಲ್ಲ. ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು ಹೇಳಿದಂತೆ ನಾವು ಕೇಳುತ್ತೇವೆ. ಹಾಗಾಗಿ ಸಿಎಂ ಅಭ್ಯರ್ಥಿ ಯಾರೆಂಬ ಪ್ರಶ್ನೆ ಉದ್ಭವಿಸಲ್ಲ. ನನ್ನ ಮತ್ತು ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನನ್ನ ಮೇಲಿನ ಅಭಿಮಾನದಿಂದ ಸಿದ್ದರಾಮಯ್ಯ ಈ ರೀತಿ ಹೇಳಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *