ನನ್ನ ಬಳಿ ಸಂಖ್ಯಾಬಲವಿದೆ, ಆಪರೇಷನ್ ಯಾಕೆ ಮಾಡಲಿ: ಸಿಎಂ ಎಚ್‍ಡಿಕೆ

– ನಮ್ಮ ಶಾಸಕರನ್ನು ರೆಸಾರ್ಟ್​ಗೆ ಕಳಿಸಲ್ಲ
– ಬಿಜೆಪಿಯಿಂದ ಕುದುರೆ ವ್ಯಾಪಾರ

ಬೆಂಗಳೂರು: ಯಾವ ರೆಸಾರ್ಟ್​ಗೂ ಯಾರನ್ನೂ ಶಿಫ್ಟ್ ಮಾಡುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನನ್ನ ಬಳಿ ಸಂಖ್ಯಾಬಲ ಇದ್ದು ನಾನ್ಯಾಕೆ ಆಪರೇಷನ್ ಮಾಡಲಿ. ನಾನು ಆರಾಮಾಗಿ ಇದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಶಾಸಕರನ್ನ ರೆಸಾರ್ಟ್​ಗೆ ಕಳಿಸುವುದಿಲ್ಲ. ಅದರ ಅವಶ್ಯಕತೆ ಇಲ್ಲ, ಬಿಜೆಪಿ ನಾಯಕರಿಗೆ ರೆಸಾರ್ಟ್ ನಲ್ಲಿ ಇರುವುದಕ್ಕೆ ನಾವೇ ಹೇಳಿದ್ದೇವೆ. ಅವರು ಅಲ್ಲಿ ಆರಾಮಾಗಿ ಇದ್ದಾರೆ. ನಾನು ಕೂಡ ಆರಾಮವಾಗಿ ಇದ್ದೇನೆ. ಯಾರ ಬಳಿಯೂ ಸಲಹೆ ತೆಗೆದುಕೊಂಡು ನಾನು ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ನಗುಮುಖದಿಂದ ಸಿಎಂ ಕುಮಾರಸ್ವಾಮಿ ಹೇಳಿದರು.

ಎಲ್ಲರ ಬಳಿ ನಾನು ಮಾತನಾಡಿ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ಬಿಜೆಪಿ ಅವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ನಾನು ಹುಡುಕಾಟಕ್ಕೆ ಆರಾಮವಾಗಿ ಇದ್ದೀನಾ? ಎಲ್ಲರು ಏನು ಮಾಡುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ನಾವೆಲ್ಲರೂ ಆರಾಮಾಗಿ ಇದ್ದೇವೆ. ನಿಮಗೆ ಮತ್ತು ಬೇರೆ ಅವರಿಗೂ ಶಾಸಕರು ನಾಟ್ ರಿಚೆಬಲ್ ಆಗಿರಬಹುದು. ಆದರೆ ಅವರೆಲ್ಲರು ನನಗೆ ರಿಚೆಬಲ್ ಇದ್ದಾರೆ. ನೀವೇ ಏನೇನೋ ಹೇಳುತ್ತಿದ್ದೀರಿ ಎಂದು ಮಾಧ್ಯಮದವರ ಮೇಲೆ ಕಿಡಿಕಾರಿದ್ದಾರೆ.

ಮೂರು ದಿನಗಳಿಂದ ಅತೃಪ್ತ ಶಾಸಕರು ನನ್ನ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಪ್ರತಿಯೊಂದು ರಾಜಕೀಯ ಬೆಳವಣಿಗೆಯ ಬಗ್ಗೆ ನಾನು ಗಮನ ಕೊಟ್ಟಿದ್ದೇನೆ. ಪ್ರತಿಯೊಂದು ವಿಚಾರವೂ ನನಗೆ ಗೊತ್ತಿದೆ. ಯಾರಿಗೆ ರಕ್ಷಣೆ ಕೊಡಬೇಕು, ಯಾರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು, ಅದರ ಬಗ್ಗೆ ನಾನು ಏನು ತೀರ್ಮಾನ ತೆಗೆದುಕೊಳ್ಳಬೇಕು ಎಲ್ಲವನ್ನು ನಾನು ಮಾಡುತ್ತಿದ್ದೇನೆ. ವೇಣುಗೋಪಾಲ್ ಅವರಿಗೆ ನಾನು ಎಲ್ಲಾ ವಿವರ ಹೇಳಿದ್ದೇನೆ. ವೇಣುಗೋಪಾಲ್ ಅಥವಾ ಕಾಂಗ್ರೆಸ್ ಹೈಕಮಾಂಡ್ ಜೊತೆ ನಾನು ಹುಡುಕಾಟ ಆಡುವುದಕ್ಕೆ ಆಗುತ್ತಾ? ನಾನು ಅಷ್ಟು ಉದ್ಧಟತನ ತೋರಿಸುತ್ತೀನಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರನ್ನು ಕೂಡಿ ಹಾಕಿಕೊಂಡಿರುವ ಬಗ್ಗೆ ಮಾತನಾಡಿ, ಈ ಬಗ್ಗೆ ಬಿಜೆಪಿಯ ಬಳಿಯೇ ಕೇಳಬೇಕು. ಬಿಜೆಪಿ ನಾಯಕರನ್ನು ಪ್ರೀತಿಯಿಂದ ಕೂಡಿ ಹಾಕಿಕೊಂಡಿದ್ದಾರ ಅಥವಾ ಸಂಕ್ರಾಂತಿ ಆಚರಣೆ ಮಾಡಲು ದೆಹಲಿಯಲ್ಲಿ ಕೂಡಿ ಹಾಕಿಕೊಂಡಿದ್ದಾರ ಅದನ್ನು ಯಡಿಯೂರಪ್ಪ ಅವರನ್ನು ಕೇಳಬೇಕು. ನಾನು ಯಾವುದೇ ಬಿಜೆಪಿ ಶಾಸಕರನ್ನ ಆಪರೇಷನ್ ಮಾಡುವುದಿಲ್ಲ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *