ದೋಸ್ತಿಗಳಿಗೆ ಶುರುವಾಯ್ತು ಸರ್ಕಾರ ಪತನದ ಭಯ – ರಾತ್ರಿವರೆಗೂ ಮೈತ್ರಿ ಮಂಥನ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಆದರೆ ಇತ್ತ ದೋಸ್ತಿಗಳಿಗೆ ಢವಢವ ಶುರುವಾಗಿದೆ. ಸರ್ಕಾರವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಚಿಂತೆಗೆ ಬಿದ್ದ ದೋಸ್ತಿಗಳು, ಹೀನಾಯ ಸೋಲಿನ ಬೆನ್ನಲ್ಲೇ ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದಾರೆ.

ಸಿಎಂ ಕುಮಾರಸ್ವಾಮಿ, ಪುತ್ರ ನಿಖಿಲ್, ಮಂಡ್ಯ ಜೆಡಿಎಸ್ ನಾಯಕರಾದ ಸಿ.ಎಸ್ ಪುಟ್ಟರಾಜು, ಶಿವರಾಮೇಗೌಡ, ಶಾಸಕ ಶಿವಲಿಂಗೇಗೌಡ ಹಾಗೂ ಸಾರಾ ಮಹೇಶ್ ದೇವೇಗೌಡರ ನಿವಾಸಕ್ಕೆ ಆಗಮಿಸಿ ತಡರಾತ್ರಿ ಸುಮಾರು 2 ಗಂಟೆವರೆಗೂ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಮಂಡ್ಯ ಹಾಗೂ ತುಮಕೂರು ಜೆಡಿಎಸ್ ನಾಯಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ಸಭೆ ಬಳಿಕ ಹಿಂದಿರುಗುವಾಗ ಮಾಜಿ ಸಂಸದ ಶಿವರಾಮೇಗೌಡ ಸಪ್ಪೆ ಮೊರೆ ಹಾಕಿಕೊಂಡಿದ್ದರು. ಇಂದು ಸಂಜೆ ಸುಮಾರು 4.30ಕ್ಕೆ ಸಿಎಂ ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಸಭೆ ಕರೆದಿದ್ದು, ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕಳೆದ ದಿನದ ಚುನಾವಣೆಯ ಫಲಿತಾಂಶದಲ್ಲಿ ಮೋದಿ ನೇತೃತ್ವದ ಎನ್‍ಡಿಎ ಒಕ್ಕೂಟಕ್ಕೆ 349 ಸ್ಥಾನ ಸಿಕ್ಕರೆ, ಬಿಜೆಪಿಯವರೇ ಬರೋಬ್ಬರಿ 303 ಕಡೆ ಕೇಸರಿ ಬಾವುಟ ಹಾರಿಸಿದ್ದಾರೆ. ಚುನಾವಣೋತ್ತರ ಸಮೀಕ್ಷೆಯನ್ನು ಮೀರಿ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಪಡೆದಿದೆ. ಇದರೊಂದಿಗೆ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಪೂರ್ಣ ಬಹುಮತದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ.

Comments

Leave a Reply

Your email address will not be published. Required fields are marked *