ಐಟಿ ದಾಳಿ ನಡೆಯಲಿದೆ ಸಿಎಂ ನಿಖರವಾಗಿ ಊಹಿಸಿದ್ದು ಹೇಗೆ: ರಹಸ್ಯ ರಿವೀಲ್ ಆಯ್ತು

ಬೆಂಗಳೂರು: ಜೆಡಿಎಸ್ ನಾಯಕರು, ಆಪ್ತರ ಮನೆ ಮೇಲೆ ಗುರುವಾರ ಐಟಿ ದಾಳಿ ನಡೆಯಲಿದೆ ಮೊದಲೇ ಸಿಎಂ ಕುಮಾರಸ್ವಾಮಿ ನಿಖರವಾಗಿ ಹೇಳಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸಾಧಾರಣವಾಗಿ ಸರ್ಕಾರಿ ಅಧಿಕಾರಿಗಳ ದಾಳಿ ವಿಚಾರ ಗೌಪ್ಯವಾಗಿರುತ್ತದೆ. ಅದರಲ್ಲೂ ಕೇಂದ್ರ ಸರ್ಕಾರ ನಿಯಂತ್ರಣದಲ್ಲಿರುವ ಸಂಸ್ಥೆಗಳು ನಡೆಸುವ ದಾಳಿ ಗೌಪ್ಯವಾಗಿದ್ದು ರಾಜ್ಯ ಸರ್ಕಾರಕ್ಕೆ ತಿಳಿಸಿ ದಾಳಿ ನಡೆಸುವುದಿಲ್ಲ. ಆದರೆ ಸಿಎಂ ಮೊದಲೇ ದಾಳಿ ನಡೆಯಲಿದೆ ಎಂದು ಭವಿಷ್ಯ ನುಡಿದಾಗ ತೆರಿಗೆ ಇಲಾಖೆಯಲ್ಲೇ ಯಾರೋ ಸಿಎಂಗೆ ಮಾಹಿತಿ ನೀಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈಗ ವಿಮಾನ ನಿಲ್ದಾಣದಲ್ಲಿರುವ ಚಾಲಕರು ಸಿಎಂಗೆ ಮಾಹಿತಿ ನೀಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ವಿಮಾನ ನಿಲ್ದಾಣದಲ್ಲಿರುವ ಕಾರು ಚಾಲಕರ ಪೈಕಿ ಯಾರೊ ಒಬ್ಬರು ಸಿಎಂ ಆಪ್ತರಿಗೆ ಕರೆ ಮಾಡಿ, ಸಿಆರ್‌ಪಿಎಫ್‌ನ 2 ತುಕಡಿಗಳು ಬೆಂಗಳೂರಿಗೆ ಬಂದಿವೆ. ಅವರು ಇಲ್ಲಿ 100 ಟ್ಯಾಕ್ಸಿಗಳನ್ನು ಒಟ್ಟಿಗೆ ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಸೂಕ್ತ ಮಾಹಿತಿ ಲಭ್ಯವಾಗುತ್ತಿಲ್ಲ. ನೀವೇ ಚೆಕ್ ಮಾಡಿಕೊಳ್ಳಿ ಎಂದು ತಿಳಿಸಿದ್ದರಂತೆ.

ಈ ಮಾಹಿತಿ ಮಾಹಿತಿಯಿಂದ ತಕ್ಷಣವೇ ಎಚ್ಚೆತ್ತುಕೊಂಡ ಕುಮಾರಸ್ವಾಮಿ ಅವರು, ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ವಿಮಾನ ನಿಲ್ದಾಣದ ಬಳಿ ಈ ರೀತಿಯ ಬೆಳವಣಿಗೆ ನಡೆಯುತ್ತಿದೆ. ನೀವು ಏನ್ ಮಾಡುತ್ತಿದ್ದೀರಿ ಪರಿಶೀಲನೆ ಮಾಡಿ ಕೂಡಲೇ ಮಾಹಿತಿ ನೀಡಿ ಎಂದು ತಾಕೀತು ಮಾಡಿದ್ದರು.

ಸಿಎಂ ಸೂಚನೆಯಿಂದ ಎಚ್ಚೆತ್ತುಕೊಂಡು ಗುಪ್ತಚರ ಇಲಾಖೆಯು ಪರಿಶೀಲನೆ ಆರಂಭಿಸಿತ್ತು. ಈ ವೇಳೆ ಗುಪ್ತಚರ ಇಲಾಖೆಗೆ ಐಟಿ ದಾಳಿಯ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೆ ವಿವಿಧ ನಾಯಕರ ಮನೆಯ ಮೇಲೆ ದಾಳಿ ಮಾಡಲು ಐಟಿ ಅಧಿಕಾರಿಗಳು 200 ಕ್ಯಾಬ್ ಬುಕ್ ಮಾಡಿರುವುದು ತಿಳಿದಿದೆ. ತಕ್ಷಣವೇ ಸಿಎಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದು ಮಂಡ್ಯದಲ್ಲಿ ಬುಧವಾರ ಸುದ್ದಿಗೋಷ್ಠಿದ ಮಾತನಾಡಿದ್ದ ಸಿಎಂ, ಐಟಿ ಅಧಿಕಾರಿಗಳಿಗೆ ಜೆಡಿಎಸ್, ಕಾಂಗ್ರೆಸ್ ನಾಯಕರೇ ಟಾರ್ಗೆಟ್ ಆಗಿದ್ದು, ಒಬ್ಬರಿಗೆ ಅನುಕೂಲ ಮಾಡಿಕೊಳ್ಳಲು ದಾಳಿಗೆ ಸಿದ್ಧತೆ ನಡೆಸಲಾಗಿದೆ. ಬಿಜೆಪಿಯ ಆಪ್ತ ಮೂಲಗಳಿಂದ ನನಗೆ ಫೋನ್ ಕರೆ ಬಂದಿದ್ದು, ಕಾಂಗ್ರೆಸ್, ಜೆಡಿಎಸ್ ಅಭಿಮಾನಿಗಳನ್ನು ಗುರಿ ಮಾಡಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಪಕ್ಷ ಬೆಂಬಲಿಗರ ಮೇಲೆ ದಾಳಿ ನಡೆಸಿ ಎಷ್ಟು ಹಣ ತೆಗೆದುಕೊಂಡು ಹೋಗುತ್ತಾರೆ ನೋಡುತ್ತೇನೆ. ಆದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ನಾನು ಕೂಡ ಪಶ್ಚಿಮ ಬಂಗಾಳ ಸಿಎಂರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಐಟಿ ದಾಳಿ ನಡೆಸುವ ಅಧಿಕಾರಿಯ ಹೆಸರನ್ನು ಪ್ರಸ್ತಾಪ ಮಾಡಿದ ಅವರು, ಐಟಿ ಇಲಾಖೆಯ ಬಾಲಕೃಷ್ಣ (ಐಆರ್‍ಎಸ್ ಅಧಿಕಾರಿ) ಎಂಬವರ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಅಧಿಕಾರಿಗಳನ್ನು ಕರೆಸಿಕೊಂಡು ದಾಳಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಐಟಿ ದಾಳಿಯಲ್ಲಿ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯ ನೆರವು ತೆಗೆದುಕೊಳ್ಳುತ್ತಾರೆ. ಆದರೆ ಅದನ್ನು ಬಿಟ್ಟು ಕೇಂದ್ರದ ಸಿಆರ್ ಪಿಎಫ್ ಕರೆಸಿಕೊಂಡು ದಾಳಿ ಮಾಡಲು ಹೊರಟಿರುವುದು ಬಹಳ ದಿನ ನಡೆಯಲ್ಲ. ಕೇಂದ್ರ ಸರ್ಕಾರದ ಬಿಜೆಪಿ ಪರ ಬಾಲಕೃಷ್ಣ ಅವರು ಬೆಳಗ್ಗೆ 5 ಗಂಟೆಗೆ ದಾಳಿ ಮಾಡಲು ಸಿದ್ಧರಾಗಿದ್ದು, ಇಂತಹ ದಾಳಿಗಳು ನಡೆದರೆ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

Comments

Leave a Reply

Your email address will not be published. Required fields are marked *