ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್- ಎಷ್ಟು ಸಂಬಳ ಏರಿಕೆ ಆಗುತ್ತೆ?

ಬೆಂಗಳೂರು: ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸು ವರದಿಗೆ ಸಹಿ ಹಾಕುವ ಮೂಲಕ ರಾಜ್ಯ ಪೊಲೀಸರಿಗೆ ಸಿಎಂ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಸಿಎಂ ಔರಾದ್ಕರ್ ವರದಿಗೆ ಸಹಿ ಇಂದು ಸಹಿ ಹಾಕಿದ್ದು, ಪೊಲೀಸರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಔರಾದ್ಕರ್ ವರದಿಯ ಫೈಲ್ ಈಗಾಗಲೇ ಆರ್ಥಿಕ ಇಲಾಖೆಯ ಕಚೇರಿ ತಲುಪಿದ್ದು, ಇಲಾಖೆಯ ಒಪ್ಪಿಗೆಯೊಂದೇ ಬಾಕಿ ಇದೆ. ಇಂದು ಅಥವಾ ನಾಳೆಯ ಒಳಗಾಗಿ ಪೊಲೀಸರ ಬಹುದಿನದ ಬೇಡಿಕೆ ಈಡೇರಲಿದೆ.

ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವು ಗುರುವಾರ ವಿಶ್ವಾಸಯಾಚನೆ ಮಾಡಲಿದೆ. ಇದಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗಲೇ ಔರಾದ್ಕರ್ ವರದಿಗೆ ಸಹಿ ಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗೃಹಸಚಿವ ಎಂ.ಬಿ.ಪಾಟೀಲ್ ಅವರು, ರಾಜ್ಯ ಪೊಲೀಸರ ದಶಕದ ಬೇಡಿಕೆಯಾಗಿದ್ದ ಔರಾದ್ಕರ್ ಸಮಿತಿಯನ್ನು ಪ್ರಸ್ತುತ ಸರ್ಕಾರದಲ್ಲಿ ನಾವು ಜಾರಿ ಮಾಡಿದ್ದೇವೆ. ಇದು ಸಿಬ್ಬಂದಿಯ ಕಲ್ಯಾಣಕ್ಕೆ ನಮಗಿರುವ ಬದ್ಧತೆಯನ್ನು ತೋರಿಸುತ್ತದೆ. ಸಮಸ್ತ ಪೊಲೀಸ್ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ನಾನು ಎಂದೆಂದೂ ಈ ವರದಿಯ ಅನುಷ್ಠಾನಕ್ಕೆ ಬದ್ಧನಾಗಿದ್ದೆ, ವರದಿಯ ಜಾರಿ ನನಗೆ ಅತ್ಯಂತ ಹರ್ಷ ತಂದಿದೆ ಎಂದು ತಿಳಿಸಿದ್ದಾರೆ.

ಎಷ್ಟು ಏರಿಕೆಯಾಗಬಹುದು?
ಔರಾದ್ಕರ್ ವರದಿ ಅನ್ವಯ ನೂತನ ವೇತನ ಪರಿಷ್ಕಣೆಯಿಂದ ಪೊಲೀಸ್ ರಿಸರ್ವ್ ಕಾನ್‍ಸ್ಟೆಬಲ್ 23,500ರಿಂದ 47,650 ರೂ. ಆಗಲಿದೆ. ಹೆಡ್ ಕಾನ್‍ಸ್ಟೇಬಲ್‍ಗೆ 27,650ದಿಂದ 52,650 ರೂ. ಏರಿಕೆಯಾಗಲಿದೆ. ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಅವರಿಗೆ 30,350 ದಿಂದ 58,250 ರೂ. ವೇತನ ಹೆಚ್ಚಲಿದೆ. ಇನ್ಸ್‍ಪೆಕ್ಟರ್‍ಗೆ 43,100ರಿಂದ 83,900 ರೂ., ಎಸ್‍ಪಿ (ಐಪಿಎಸ್ ಹೊರತು ಪಡಿಸಿ) 70,850ದಿಂದ 1,07,100 ರೂ. ಏರಿಕೆ ಆಗಲಿದೆ. ಈ ನೂತನ ವೇತನವು ಆಗಸ್ಟ್ 1 ರಿಂದ ಅನ್ವಯವಾಗಲಿದೆ ಎನ್ನಲಾಗಿದೆ.

ಈಗೀನ ಪೇ ಸ್ಕೇಲ್ ಪ್ರಕಾರ ಪೊಲೀಸ್ ಕಾನ್‍ಸ್ಟೇಬಲ್, ರಿಸರ್ವ್ ಕಾನ್ಸ್ ಟೇಬಲ್‍ಗೆ 12,500ದಿಂದ 24,000 ರೂ., ಹೆಡ್ ಕಾನ್ಸ್‍ಸ್ಟೇಬಲ್‍ಗೆ 14,559ರಿಂದ 26,700 ರೂ., ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ 16,000ದಿಂದ 29,600 ರೂ., ಇನ್ಸ್‍ಪೆಕ್ಟರ್ 22,800ರಿಂದ 43,200 ರೂ., ಹಾಗೂ ಎಸ್‍ಪಿ (ಐಪಿಎಸ್ ಹೊರತು ಪಡಿಸಿ) 38,100-55,200 ರೂ. ಇದೆ.

ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ವೇಳೆ ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಆಗ ಪೊಲೀಸರು ಭಾರೀ ಭದ್ರತೆ ಒದಿಸುವ ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಿಎಂ ಬಜೆಟ್ ನಲ್ಲಿ ಔರಾದ್ಕರ್ ವರದಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಇದಾದ ಬಳಿಕ ಗೃಹ ಸಚಿವ ಎಂಬಿ ಪಾಟೀಲ್ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.

ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಪೊಲೀಸರ ವೇತನವನ್ನು ಶೇ.30 ಏರಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

Comments

Leave a Reply

Your email address will not be published. Required fields are marked *