ಮಂಡ್ಯ ಜನರ ಮೇಲೆ ಸಿಎಂ ಪ್ರೀತಿಯ ಅಸ್ತ್ರ ಪ್ರಯೋಗ!

ಬೆಂಗಳೂರು: ಜೆಡಿಎಸ್ ಅಭ್ಯರ್ಥಿಯಾಗಿ ಲೋಕಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿ ಸುಮಲತಾರನ್ನ ಗೆಲ್ಲಿಸಿದ ಮಂಡ್ಯದ ಜನರ ಮೇಲೆ ಯಾರೂ ನಿರೀಕ್ಷೆ ಮಾಡದ ಪ್ರೀತಿಯ ಅಸ್ತ್ರ ಪ್ರಯೋಗಿಸಲು ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ. ಅದಕ್ಕೆ ಜನತಾ ದರ್ಶನ ವೇದಿಕೆಯಾಗಲಿದೆ.

ಹೌದು. ಇದೇ ತಿಂಗಳಿನಿಂದ ಆರಂಭವಾಗಲಿರುವ ಗ್ರಾಮ ವಾಸ್ತವ್ಯದ ಆರಂಭವನ್ನ ಮಂಡ್ಯ ಜಿಲ್ಲೆಯಿಂದಲೇ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಸ್ವತಃ ಸಿಎಂ ಕುಮಾರಸ್ವಾಮಿ ಇದರ ಸಾಧಕ ಬಾಧಕಗಳ ಬಗ್ಗೆ ಆಪ್ತರ ಬಳಿ ಚರ್ಚಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಮಂಡ್ಯದಲ್ಲೇ ಮೊದಲ ಜನತಾ ದರ್ಶನ ಮಾಡುವ ಮೂಲಕ ನೀವು ನನ್ನ ಮಗನನ್ನ ಕೈ ಬಿಟ್ಟರೂ ನಾನು ನಿಮ್ಮನ್ನ ಕೈ ಬಿಡಲ್ಲ ಅನ್ನೋ ಮೆಸೇಜ್ ಪಾಸ್ ಮಾಡುವುದು. ಆ ಮೂಲಕ ಮಗನನ್ನ ಸೋಲಿಸಿದ ನಮ್ಮ ಮೇಲೆ ಸಿಎಂ ಮುನಿಸಿಕೊಂಡಿದ್ದಾರೆ ಎಂದು ಕೊಂಡಿರುವ ಜನರಿಗೆ ಶಾಕ್ ನೀಡುವುದು. ಅಲ್ಲದೆ ಮಗನನ್ನ ಸೋಲಿಸಿದರೂ ನಾವು ಇವರಿಗೆ ನಮ್ಮ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ ಎಂದು ಮಂಡ್ಯದ ಜನರೆ ಪಶ್ಚಾತ್ತಾಪ ಪಡುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎನ್ನಲಾಗುತ್ತಿದೆ.

ಮಗನನ್ನ ಸೋಲಿಸಿ ತಿಂಗಳು ಕಳೆಯುವುದರ ಒಳಗೆ ನಮ್ಮ ಕಷ್ಟ ಆಲಿಸಲು ನಮ್ಮ ಜಿಲ್ಲೆಯಲ್ಲೇ ಮೊದಲ ಗ್ರಾಮ ವಾಸ್ತವ್ಯ ಮಾಡಿದ್ರಲ್ಲ ಎಂದು ಮಂಡ್ಯದ ಜನ ಮುಜುಗರ ಪಡುವಂತೆ ಮಾಡುವುದು. ಹೀಗೆ ತಮ್ಮ ಪುತ್ರನನ್ನ ಸೋಲಿಸಿದ ಮಂಡ್ಯ ಜನರಿಗೆ ಪ್ರೀತಿ ತೋರಿಸಿ ಪಶ್ಚಾತ್ತಾಪ ಪಡುವಂತೆ ಹಾಗೂ ಮುಜುಗರ ಉಂಟುಮಾಡಿ ನೀವು ನನ್ನ ಕೈ ಬಿಟ್ಟಿರಬಹುದು ಆದರೆ ನಾನು ನಿಮ್ಮನ್ನ ಕೈ ಬಿಡಲ್ಲ ಎಂಬ ಮೆಸೆಜ್ ಪಾಸ್ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಮೂಲಕ ಮಂಡ್ಯ ಜನರ ಮೇಲಿನ ತಮ್ಮ ನೋವನ್ನ ಹೊರಹಾಕುವ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *