ನಾಳೆಯೂ ಸಿಎಂ ಕೊಡಗು ಪ್ರವಾಸ ಮುಂದುವರಿಕೆ – ಸಂತ್ರಸ್ತರಿಗೆ ಪರಿಹಾರ ಘೋಷಣೆ

ಮಡಿಕೇರಿ: ಮಡಿಕೇರಿ ಹಾಗೂ ರಾಜ್ಯದಲ್ಲಿ ಮಳೆಬಾಧಿತ ಪ್ರದೇಶಗಳ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆಯೂ ಪ್ರವಾಸವನ್ನು ಮುಂದುವರಿಸಿದ್ದಾರೆ. ಕೊಡಗಿಗೆ ನೆರವು ನೀಡುವಲ್ಲಿ ರಾಜ್ಯದ ಜನತೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸಿಎಂ ಕುಮಾರಸ್ವಾಮಿ ಆಗಸ್ಟ್ 19 ರಂದು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಪ್ರವಾಸಕ್ಕೆ ನಿರ್ಧರಿಸಿದ್ದರು. ಆದರೆ ಅದನ್ನು ರದ್ದು ಪಡಿಸಿ ಕೊಡಗು ಜಿಲ್ಲೆಯ ಪ್ರವಾಸ ಮುಂದುವರೆಸಲಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಿದ ನಂತರ ರಸ್ತೆ ಮೂಲಕ ಮಡಿಕೇರಿಗೆ ತೆರಳಿದ ಕುಮಾರಸ್ವಾಮಿ, ಅಲ್ಲಿನ ಗಂಜಿ ಕೇಂದ್ರವೊಂದಕ್ಕೆ ತೆರಳಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಮಡಿಕೇರಿಯ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದರು. ಭೂಕುಸಿತದಿಂದ ಸಿಲುಕಿಕೊಂಡಿರುವ ಸುಮಾರು 60 ಜನರನ್ನು ರಕ್ಷಿಸಲು ಸಿಎಂ ಪ್ರಯಾಣಿಸಿದ ಹೆಲಿಕಾಪ್ಟರ್ ಬಳಸಲಾಗುತ್ತಿದೆ. ಹೀಗಾಗಿ ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿ, ನಾಳೆಯೂ ಕೊಡಗು ಜಿಲ್ಲೆಯ ಪ್ರವಾಸಕ್ಕೆ ನಿರ್ಧರಿಸಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ದೊಡ್ಡ ಪ್ರಮಾಣದ ನಷ್ಟವಾಗಿದ್ದು, ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ. ಇತ್ತ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ವೈಮಾನಿಕ ಸಮೀಕ್ಷೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸುವುದಾಗಿ ಸಿಎಂ ಹೇಳಿದ್ದಾರೆ.

ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದ ಹಾನಿಯಾಗಿದ್ದು, ಉದಾರವಾಗಿ ನೆರವು ನೀಡುವಂತೆ ನಾಡಿನ ಜನರಿಗೆ ಮನವಿ ಮಾಡಿಕೊಂಡರು. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕಾಫಿ, ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಮಾಹಿತಿಯ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇತ್ತ ಕಾಫಿ ಬೋರ್ಡ್ ಅಧಿಕಾರಿಗಳಿಗೂ ಸೂಚಿಸಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಭೆಯ ಮುಖ್ಯಾಂಶಗಳು:
ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಏಪ್ರಿಲ್‍ನಿಂದ ಇಲ್ಲಿವರೆಗೆ 153 ಮಂದಿ ಮೃತಪಟ್ಟಿದ್ದಾರೆ. 11,427 ಮನೆಗಳು ನಾಶವಾದರೆ, 700ಕ್ಕೂ ಹೆಚ್ಚು ಜಾನುವಾರು ಸಾವನ್ನಪ್ಪಿವೆ. ಕೊಡಗಿನಲ್ಲಿ 7 ಜನ ಮೃತಪ್ಪಿದ್ದಾರೆ ಹಾಗೂ 800ಕ್ಕೂ ಹೆಚ್ಚು ಮನೆ ನಾಶವಾಗಿವೆ. ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿ ಕುಮಾರಸ್ವಾಮಿ ಕೊಡಗು ಜಿಲ್ಲೆಯ ಅಭಿವೃದ್ಧಿಗೆ 100 ಕೋಟಿ ರೂ. ಪರಿಹಾರ ಘೋಷಣೆಯಾಗಿದ್ದು, ಇದರಲ್ಲಿ 30 ಕೋಟಿ ರೂ.ವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನು ಮನೆ ಕಳೆದುಕೊಂಡವರಿಗೆ 2 ರಿಂದ 2.50 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Comments

Leave a Reply

Your email address will not be published. Required fields are marked *