ಪ್ರಚಾರದ ಭರದಲ್ಲಿ ಸಿಎಂರಿಂದ ನೀತಿ ಸಂಹಿತೆ ಉಲ್ಲಂಘನೆ!

ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಲವು ಯೋಜನೆಗಳ ಘೋಷಣೆ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು, ಒಣಗಿ ಹೋದ ತೆಂಗಿನ ಮರಕ್ಕೆ 400 ರೂ ಪರಿಹಾರ ಈಗಾಗಲೇ ಕೊಡುತಿದ್ದೇವೆ. ಅದು ಸಾಕಾಗಲ್ಲ ಎಂದು ಹೇಳಿದ್ದರು.

ಜಯಚಂದ್ರ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, ಜಯಚಂದ್ರ ಅವರು 400 ರಿಂದ 1000 ರೂ. ಗೆ ಏರಿಕೆ ಮಾಡಬೇಕು ಅಂದಿದ್ದಾರೆ. ಆ ಕುರಿತು ಚುನಾವಣೆ ಮುಗಿದ ಬಳಿಕ ನೋಡೋಣ ಎಂದು ಪರೋಕ್ಷವಾಗಿ 1000 ರೂ. ಕೊಡುವ ಭರವಸೆ ಸಿಎಂ ನೀಡಿದರು. ಹಾಗೆಯೇ ಭದ್ರಾ ಮೇಲ್ದಂಡೆ ನೀರನ್ನು ಶಿರಾ ಚಿಕ್ಕನಾಯಕನಹಳ್ಳಿಗೆ ಹರಿಸುತ್ತೇನೆ. 8 ರಿಂದ 10 ತಿಂಗಳ ಅವಕಾಶ ಕೊಡಿ. ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಕಟ್ಟೆ ತುಂಬಿಸುವ ಕೆಲಸ ಮಾಡಬೇಕಿದೆ. ನೀತಿ ಸಂಹಿತೆ ಇರುವುದರಿಂದ ಹೆಚ್ಚಿಗೆ ಹೇಳಿಕೆ ಆಗೋಲ್ಲ ಎಂದಿದ್ದರು.

ಹೀಗಾಗಿ ಚುನಾವಣಾ ವೇಳೆಯಲ್ಲಿ ಈ ಆಶ್ವಾಸನೆಗಳನ್ನು ನೀಡುವ ಮೂಲಕ ಸಿಎಂ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ  ಎಂದು ಕುಮಾರಸ್ವಾಮಿ ವಿರುದ್ಧ ಆರೋಪ ವ್ಯಕ್ತವಾಗುತ್ತಿದೆ.

Comments

Leave a Reply

Your email address will not be published. Required fields are marked *