ನಾನು, ಡಿಕೆಶಿ ನಿಜವಾದ ಜೋಡೆತ್ತುಗಳು: ಸಿಎಂ

-ಅಂಬರೀಶಣ್ಣನ ಆತ್ಮಕ್ಕೆ ಶಾಂತಿ ಸಿಗಬೇಕೆಂದ್ರೆ ನಿಖಿಲ್‍ಗೆ ನಿಮ್ಮ ಮತ: ಡಿಕೆಶಿ

ಮಂಡ್ಯ: ಸಚಿವ ಡಿ.ಕೆ.ಶಿವಕುಮಾರ್ ಮತ್ತು ನಾನು ನಿಜವಾದ ಜೋಡೆತ್ತುಗಳು ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ, ನಟರಾದ ದರ್ಶನ್ ಹಾಗೂ ಯಶ್‍ಗೆ ತಿರುಗೇಟು ನೀಡಿದರು.

ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಕೆಗೆ ಮುನ್ನ ತಂದೆ, ಸಿಎಂ ಕುಮಾರಸ್ವಾಮಿ ಅವರು ಕುಟುಂಬ ಸಮೇತವಾಗಿ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ 2 ಕಿ.ಮೀ. ಉದ್ದ ರ‍್ಯಾಲಿಯಲ್ಲಿ ರೋಡ್ ಶೋ ನಡೆಸಿ, ದೊಡ್ಡಪ್ಪ ರೇವಣ್ಣ ನಿಗದಿಪಡಿಸಿದ್ದ ಮುಹೂರ್ತದಲ್ಲಿ ನಿಖಿಲ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೈತ್ರಿ ಅಭ್ಯರ್ಥಿಗೆ ಕಾಂಗ್ರೆಸ್ ಸಚಿವ ಡಿಕೆ ಶಿವಕುಮಾರ್ ಸಾಥ್ ನೀಡಿದರು.

ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಇಂತಹ ಜನಸಾಗರವನ್ನು ನಾಗಮಂಗಲದಲ್ಲಿ ಕಂಡಿದ್ದೆ ಅಂತ ಚಲುವರಾಯಸ್ವಾಮಿಗೆ ಟಾಂಗ್ ಕೊಟ್ಟರು. ಪಕ್ಷೇತರ ಅಭ್ಯರ್ಥಿ ಪರ ಯಡಿಯೂರಪ್ಪ ಪ್ರಚಾರಕ್ಕೆ ಬರ್ತಾರಂತೆ. ಮಂಡ್ಯ ಬಜೆಟ್ ಅಂತಿದ್ದವ್ರು ಈಗ ಏನ್ ಕೆಲಸ ಮಾಡಿದ್ದೀವಿ ಅಂತ ಪ್ರಚಾರ ಮಾಡ್ತಾರೆ ಅಂತ ಟೀಕಿಸಿದರು. ಪಕ್ಷೇತರ ಅಭ್ಯರ್ಥಿ ಪರ ಜೋಡೆತ್ತುಗಳು ಅಂದವರು ಹೊಲ ಉಳೋವರಲ್ಲ, ಅರ್ಧರಾತ್ರಿ ಬಂದು ಮೇಯ್ದುಕೊಂಡು ಹೋಗುತ್ತಾರೆ ಎಂದು ಯಶ್, ದರ್ಶನ್‍ಗೆ ತಿರುಗೇಟು ನೀಡಿ, ನಿಜವಾದ ಜೋಡೆತ್ತುಗಳು ನಾವು ಎಂದು ಡಿ.ಕೆ.ಶಿವಕುಮಾರ್ ಅವರನ್ನು ತೋರಿಸಿದರು.

ಸರ್ಕಾರ ರಚನೆ ವೇಳೆ ಕುಮಾರಸ್ವಾಮಿ ಅಧಿಕಾರಕ್ಕೆ ಬರಬೇಕು ಅಂತ ಅಂಬರೀಶಣ್ಣ ಹೇಳಿಲ್ವಾ..? ಅಂಬರೀಶಣ್ಣನ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ ನೀವು ನಿಖಿಲ್ ಅವರನ್ನು ಗೆಲ್ಲಿಸಬೇಕು. ಸುಮಲತಾ ಅವರು ನಮ್ಮ ಬೆಂಬಲ ಕೋರಿದರು. ನಿಮಗೆ ರಾಜಕೀಯಕ್ಕೆ ಬರೋ ಆಸಕ್ತಿ ಇದ್ದರೆ ಮೈಸೂರಿನಲ್ಲಿ ಸ್ಪರ್ಧೆ ಮಾಡಿ ಎಂದು ಹೇಳಲಾಗಿತ್ತು. ಜಾತ್ಯತೀತ ನೆಲಗಟ್ಟಿನಲ್ಲಿ ನಾವು ಒಂದಾಗಿದ್ದರಿಂದ ಜೆಡಿಎಸ್ ಗೆ ನೀಡಿರುವ ಬೆಂಬಲ ಪಡೆಯಲು ಸಾಧ್ಯವಿಲ್ಲ ಎಂದು ಸುಮಲತಾರಿಗೆ ಕಾಂಗ್ರೆಸ್ ಹೇಳಿತ್ತು ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.

ಯಡಿಯೂರಪ್ಪ-ಮೋದಿ-ದೇವೇಗೌಡರಿಗೆ ನಡೀತಿರೋ ಚುನಾವಣೆ ಇದಾಗಿದೆ. ನಿಖಿಲ್ ಕುಮಾರಸ್ವಾಮಿಯನ್ನು ಅತ್ಯಂತ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿಕೊಡಬೇಕು. ಇದೇ ವೇಳೆ, ತಳ್ಳಾಟ ಮಾಡ್ಬೇಡಿ. ಪಿಕ್‍ ಪಾಕೆಟ್‍ನವರು ಇರ್ತಾರೆ ಹುಷಾರು ಅಂತ ಸಚಿವರು ಕಾರ್ಯಕರ್ತರನ್ನು ಎಚ್ಚರಿಸಿದರು.

Comments

Leave a Reply

Your email address will not be published. Required fields are marked *