ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಅಸಮಾಧಾನ

ಬೆಂಗಳೂರು: ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ನಡುವಿನ ಮುಸುಕಿನ ಗುದ್ದಾಟ ತೀವ್ರಗೊಂಡಿದ್ದು ರೈತರ ಸಾಲಮನ್ನಾ ವಿಚಾರವಾಗಿ ನಡೆದ ಸುದ್ದಿಗೋಷ್ಟಿಯಲ್ಲಿ ಸಿಎಂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ರೈತರ ಸಾಲಮನ್ನಾ ಸಂಬಂಧ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿಯವರು, ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಚರ್ಚೆ ನಡಿಯುತ್ತಿದೆ. ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಅಂತಾ ಹೇಳುತ್ತಿದ್ದಾರೆ. ಅಲ್ಲದೆ ನಾನು ಯಾರ ಹಂಗಲ್ಲೂ ಇಲ್ಲ, ಯಾರೂ ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಅಸಮಧಾನ ಹೊರಹಾಕಿದರು.

ನನಗೆ ಸಮ್ಮಿಶ್ರ ಸರ್ಕಾರವನ್ನು ಹೇಗೆ ನಿಭಾಯಿಸಬೇಕೆಂದು ತಿಳಿದಿದೆ. ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಜನರ ಬಳಿ ಹೇಳಿಕೊಳ್ಳವ ಪರಿಸ್ಥಿತಿಯಲ್ಲಿಲ್ಲ. ಬೇರೆಯವರ ಹಾಗೆ ದುರಹಂಕಾರದಿಂದ ಕೆಲಸ ಮಾಡಿಸಿಕೊಳ್ಳುವ ಸ್ವಭಾವ ನನ್ನದಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಕುಟುಂಬದ ರೀತಿಯಲ್ಲಿ ಅಧಿಕಾರ ನಡೆಸುವ ವ್ಯಕ್ತಿತ್ವ ಹೊಂದಿದ್ದೇನೆ. ನಮ್ಮ ಸರ್ಕಾರ ಎಷ್ಟು ದಿನ ಇರುತ್ತೋ ಅನ್ನುವುದು ಮುಖ್ಯವಲ್ಲ, ನಾನು ನನ್ನ ಜನತೆಗೆ ಏನು ಕೊಡುತ್ತೇನೆ ಅನ್ನೋದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಸಾಲಮನ್ನಾ, ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಮುನಿಸು: ಆಪ್ತರ ಜೊತೆ ಮಾತನಾಡಿದ್ದು ಏನು? ಆಡಿಯೋ ಕೇಳಿ

ಸಾಲ ಮನ್ನಾಕ್ಕೆ ಒಪ್ಪಿಕೊಳ್ಳಬೇಡಿ ಅಂತ ಹಣಕಾಸು ಇಲಾಖೆ ಅಧಿಕಾರಿಗಳೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಮಾತುಗಳನ್ನು ಹೇಳುವುದನ್ನು ಮೊದಲು ಬಿಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಸಾಲ ಮನ್ನಾದಿಂದ ನನಗೆ ಯಾವ ಕಮಿಷನ್ ಬರಲ್ಲ, ಕಮಿಷನ್‍ಗಾಗಿ ಕೆಲಸ ಮಾಡುವಂತಹ ವ್ಯಕ್ತಿ ನಾನಲ್ಲ ಹಾಗೂ ಈ ಸರ್ಕಾರದಲ್ಲಿ ಯಾವ ಅಧಿಕಾರಿಗಳಿಗೆ ಎಷ್ಟು ಕಮಿಷನ್ ಹೋಗುತ್ತೆ ಅಂತ ನನಗೆ ಗೊತ್ತು ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

Comments

Leave a Reply

Your email address will not be published. Required fields are marked *