ದೋಸ್ತಿಗಳ ಕಿತ್ತಾಟ: ಹೊಸ ದಾಳ ಉರುಳಿಸಿದ್ರು ಸಿಎಂ ಎಚ್‍ಡಿಕೆ!

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರದ ನಾಯಕರು ತಮ್ಮ ಹೇಳಿಕೆಗಳ ಮೂಲಕ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಅವರ ಹೇಳಿಕೆ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ನಾಯಕರನ್ನು ಸುಮ್ಮನಾಗಿಸಲು ಹೊಸ ದಾಳವನ್ನು ಉರುಳಿಸಿದ್ದಾರೆ.

ಜೆಡಿಎಸ್ ಸೇರಿದಂತೆ ಕಾಂಗ್ರೆಸ್ ಶಾಸಕರನ್ನು ಸುಮ್ಮನೆ ಮಾಡಲು ಎಚ್‍ಡಿ ಕುಮಾರಸ್ವಾಮಿ ಅವರು ಹೊಸ ತಂತ್ರ ಬಳಿಸಿದ್ದಾರೆ. ಕೇಂದ್ರದತ್ತ ಕೈ ತೋರಿಸುವ ಮೂಲಕ ರಾಜ್ಯ ಸರ್ಕಾರ ವಿರುದ್ಧ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ.

ಹೆಚ್‍ಡಿಕೆ ಟ್ವೀಟ್:
ಕೇಂದ್ರದಲ್ಲಿ ಇನ್ನೊಂದು ಹೊಸ ಸರ್ಕಾರ ರಚನೆಯಾಗುವ ಮಹತ್ತರ ಘಟ್ಟದಲ್ಲಿ ನಾವಿದ್ದೇವೆ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯ ನಮ್ಮೆಲ್ಲರ ಆಶಯ ಸಾಕಾರಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಮೈತ್ರಿಪಕ್ಷಗಳ ಮುಖಂಡರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದು ಇಂತಹ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು. ಆದ್ದರಿಂದ ಉಭಯ ಪಕ್ಷಗಳ ಮುಖಂಡರು ಇಂತಹ ಆಶಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಯಾವುದೇ ವಿಭಿನ್ನ, ವಿವಾದಾತ್ಮಕ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಾಧನೆಗಳೇನು ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಗುರಿಯಾಗಿದ್ದರು. ಸದ್ಯ ಜೆಡಿಎಸ್ ಹಿರಿಯ, ಅನುಭವಿ ನಾಯಕ ಬಸವರಾಜ್ ಹೊರಟ್ಟಿ ಅವರು ಗೊಂದಲಗಳ ನಡುವೆ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವುದಕ್ಕಿಂತ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆ ಎದುರಿಸುವುದು ಉತ್ತಮ ಎಂದಿದ್ದರು. ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದರು.

Comments

Leave a Reply

Your email address will not be published. Required fields are marked *