ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸಿದ್ರು ಸಿಎಂ ಎಚ್‍ಡಿಕೆ

ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನ ಈ ಬಾರಿ ಬೆಂಗಳೂರಿನಲ್ಲೇ ನಡೆಯುವುದು ಅಧಿಕೃತವಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಕ್ಷಣಾ ಸಚಿವಾಲಯಕ್ಕೆ ವಂದನೆಗಳನ್ನು ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಏರೋ ಇಂಡಿಯಾ ಪ್ರದರ್ಶನ ಈ ಬಾರಿಯೂ ಬೆಂಗಳೂರಿನಲ್ಲಿಯೇ ಜರುಗಲಿದೆ. ಇದು ನನಗೆ ತುಂಬಾ ಸಂತೋಷ ತಂದಿದೆ. ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎನ್ನುವ ವಿಷಯ ಆತಂಕ ತಂದಿತ್ತು. ಪ್ರತಿಷ್ಠಿತ ಏರ್ ಶೋ ಇಲ್ಲಿಯೇ ಮುಂದುವರಿಸುತ್ತಿರುವುದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ.

2019ರ ಏರೋ ಇಂಡಿಯಾ ಏರ್ ಶೋ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಲಕ್ನೋದಲ್ಲಿ ಏರ್ ಶೋ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರದ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಲಕ್ನೋದಲ್ಲಿ ನಡೆಸಲು ಸಿದ್ಧತೆ ನಡೆಸಿದೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದ ವೇಳೆ ಈ ಪ್ರಶ್ನೆ ಕೇಳಿದ್ದಕ್ಕೆ ವಿವಿಧ ರಾಜ್ಯಗಳು ಏರ್ ಶೋ ನಡೆಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರೇ ಹೊರತು ಬೆಂಗಳೂರಿನಲ್ಲೇ ನಡೆಯಲಿದೆ ಎನ್ನುವುದನ್ನು ತಿಳಿಸಿರಲಿಲ್ಲ. ಈ ಎಲ್ಲ ಕಾರಣದಿಂದ ಏರ್ ಶೋ ಬೆಂಗಳೂರಿನಲ್ಲಿ ನಡೆಯುತ್ತಾ ಎನ್ನುವ ಅನುಮಾನ ಎದ್ದಿತ್ತು.

2019ರ ಫೆಬ್ರವರಿ 20-24ರ ವರೆಗೆ ಮೆಗಾ ಏರ್ ಶೋ ನಡೆಸಲು ಸಿದ್ಧತೆ ನಡೆದಿದೆ. 1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಆಯೋಜನೆಯಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *