ಯಾವ ನಷ್ಟ ಬೇಕಾದ್ರು ಹಾಕಿಕೊಳ್ಳಲಿ: ಬಿಎಸ್‍ವೈಗೆ ಎಚ್‍ಡಿಕೆ ತಿರುಗೇಟು

ರಾಮನಗರ: ಸಿಎಂ ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಮಾತಿಗೆ ಸಿಎಂ ಎಚ್‍ಡಿಕೆ ಮಾನ ಯಾರಿಗೆ ಇದೆ. ಯಾವ ನಷ್ಟದ ಕೇಸ್ ಬೇಕಾದರೂ ಹಾಕಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ಯಾರಿಗೆ ಏನು ನಷ್ಟ ಆಗಿದೆ. ಅದರ ಮೇಲೆ ಕೇಸ್ ಹಾಕಿಕೊಳ್ಳಲಿ. ಕಾನೂನು ಕ್ರಮ ಎದುರಿಸುವ ಶಕ್ತಿ ನನಗಿದೆ. ಅವರು ಐಟಿ ಅಧಿಕಾರಿಗಳನ್ನು ಬಳಸಿಕೊಳ್ಳುವುದರಲ್ಲಿ ಸಂಶಯ ಇದೀಯಾ? ನಾನು ಆ ರೀತಿ ಸುಖ ಸುಮ್ಮನೆ ಹೇಳಲು ಸಾಧ್ಯವೇ? ಆದರೆ ಅವರು ದೂರು ದಾಖಲಿಸಿದ ಬಳಿಕ ಅಗತ್ಯ ಮಾಹಿತಿ ನೀಡುತ್ತೇನೆ. ನಾನು ಎಲ್ಲೂ ಕದ್ದು ಹೋಗಿ ಪಲಾಯಾನ ಮಾಡಲ್ಲ. ಯಾವುದೇ ಚರ್ಚೆ ಮಾಡಬೇಕಾದರೆ ಸೂಕ್ತ ಮಾಹಿತಿಯ ಸಂಗ್ರಹ ಇಟ್ಟುಕೊಂಡೆ ಹೇಳುವುದು ಎಂದು ತಿಳಿಸಿದರು.

ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದ ಎಚ್‍ಡಿಕೆ, ಅಧಿಕಾರಕ್ಕೆ ಬರುವವರೆಗೂ ನನ್ನಿಂದ ನಿಮ್ಮ ನಿರೀಕ್ಷೆಗೆ ತಕ್ಕ ಕೆಲಸಗಳಾಗಿಲ್ಲ ಎಂದು ಆರೋಪಿಸಬೇಡಿ ಎಂದು ಹೇಳಿದ್ದೆ. ಆ ವೇಳೆ ಕ್ಷೇತ್ರದ ಜನರಿಗೆ ಮಾತು ಕೊಟ್ಟಿದ್ದೆ. ಸದ್ಯ ಮೈತ್ರಿ ಸರ್ಕಾರದಲ್ಲಿ ನನಗೆ ಮತ್ತೆ ಅವಕಾಶ ಸಿಕ್ಕಿದೆ. ಸರ್ಕಾರ 100 ದಿನಗಳ ಅಧಿಕಾರ ಪೂರ್ಣಗೊಳಿಸಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಿದ್ದೇನೆ ಎಂದು ಕ್ಷೇತ್ರದ ಜನತೆಗೆ ಆಶ್ವಾಸನೆ ನೀಡಿದರು.

ಅಂಗನವಾಡಿ ನೌಕಕರ ಬೇಡಿಕೆ ವಿಚಾರ ಪ್ರಸ್ತಾಪಿಸಿದ ಸಿಎಂ, ಬೇಡಿಕೆಗಳನ್ನು ಈಡೇರಿಸಲು ಈ ಸರ್ಕಾರಕ್ಕೆ ಸಮಯಾವಕಾಶ ಬೇಕಿದೆ. ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ಸಂಬಳ ನೀಡಲು 16 ಸಾವಿರ ಕೋಟಿ ಹೊರೆಯಾಗಿದೆ. ರೈತರ ಸಾಲ ಮನ್ನಾದ ಜವಾಬ್ದಾರಿ ಈ ಸರ್ಕಾರದ ಮೇಲಿದೆ. ಸಾಲಮನ್ನಾದ ವಿಚಾರದಲ್ಲಿ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾವುದೇ ಗೊಂದಲಗಳಿಲ್ಲ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಸೇರಿದಂತೆ ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲಮನ್ನಾದ ಬಾಬ್ತು ಸೇರಿದಂತೆ ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಕ್ಕೆ ಬರುವ ಆದಾಯದ ಮೂಲಕವೇ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾವನ್ನು 4 ಕಂತುಗಳಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *