ವಿಕಲಚೇತನ ಹೆಣ್ಣು ಮಗಳನ್ನ ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿ ಸಾಧನೆ: ಸಿಎಂ ಎಚ್‍ಡಿಕೆ

ಮಂಡ್ಯ: ಲೋಕ ಮಂಡ್ಯ ಕಣದಲ್ಲಿ ಪ್ರಚಾರ ಜೋರಾಗಿದ್ದು, ಪುತ್ರನನ್ನು ಗೆಲ್ಲಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಸಿಎಂ ಕುಮಾರಸ್ವಾಮಿ ಇವತ್ತು ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ವಿಕಲಚೇತನ ಹೆಣ್ಣು ಮಗಳು, ಜಿಲ್ಲಾಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿಯ ಸಾಧನೆ ಎಂದು ಆರೋಪಿಸಿದರು.

ಪ್ರಚಾರದ ವೇಳೆ ಮಾತನಾಡಿದ ಸಿಎಂ, ಮೊದಲು ನಮ್ಮಲ್ಲೇ ಇದ್ದವರು, ಈಗ ನಮ್ಮನ್ನೇ ಮುಗಿಸಲು ಹೊರಟಿದ್ದಾರೆ ಎಂದು ಮಂಡ್ಯ ರೆಬೆಲ್ ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರಿದರು. ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿರುವ ಮಕ್ಕಳೆಲ್ಲಾ ನಾನು ಕಣ್ಣೀರು ಹಾಕ್ತೀನಿ ಎಂದು ಮಾತನಾಡುತ್ತವೆ ಎಂದು ಹೆಸರು ಹೇಳದೇ ಸುಮಲತಾ ಪುತ್ರ ಅಭಿಷೇಕ್‍ಗೆ ತಿರುಗೇಟು ಕೊಟ್ಟರು.

ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಒಟ್ಟು 1,127 ಕೋಟಿ ರೂ. ರೈತರು ಸಾಲ ಮಾಡಿದ್ದೀರಿ. ಇದರಲ್ಲಿ ಈಗಾಗಲೇ 400 ಕೋಟಿ ರೂ. ಹಣ ಕೊಟ್ಟಿದ್ದೇನೆ. ಆದರೆ ನನ್ನ ವಿರುದ್ಧ ರೈತರಿಗೆ ಮೋಸ ಮಾಡಿದ್ದೇನೆ ಎಂದು ಹೇಳುವವರ ಮಾತು ನಂಬುತ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ನನ್ನ ಇನ್ನೊಂದು ಮುಖ ನೋಡಿಲ್ಲ. ನೋಡಿದರೆ ಹೆದರಿ ಓಡುತ್ತಾರೆ ಎಂದು ಅವರು ಹೇಳುತ್ತಾರೆ. ನಮಗೆಲ್ಲ ನಿಮ್ಮ ಮೂರು ನಾಲ್ಕು ಮುಖ ಗೊತ್ತಿದೆ. ಜನ ನೋಡಬೇಕು ನಿಮ್ಮ ಇನ್ನೊಂದು ಮುಖ ತೋರಿಸಿ ಎಂದು ಸುಮಲತಾ ಅವರಿಗೆ ಟಾಂಗ್ ನೀಡಿದರು.

ನನ್ನ ಕೊನೆಯ ಉಸಿರು ಇರುವವರೆಗೂ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ. ನಾನು ಯಾರ ಬಗ್ಗೆಯೂ ಚರ್ಚೆ ಮಾಡಲು ಹೋಗಲ್ಲ. ನನ್ನ ವಿರುದ್ಧ ನಿಂತಿರುವವವರಿಗೆ ಬಿಜೆಪಿ ಬೆಂಬಲ ಕೊಡುತ್ತೇನೆ ಎಂದು ಹೇಳಿ ಮುಂದೆ ಬಂದಿದೆ. ಇದೇ ಬಿಜೆಪಿಯವರು ವಿಧಾನಸೌಧದಲ್ಲಿ ನಾನು ಮಂಡ್ಯಕ್ಕಷ್ಟೇ ಸಿಎಂ ಎಂದು ಟೀಕೆ ಮಾಡಿದ್ದರು. ಇಂತಹವರಿಂದ ಮಂಡ್ಯ ಅಭಿವೃದ್ಧಿ ಸಾಧ್ಯವೇ ಯೋಚನೆ ಮಾಡಿ ಮತದಾನ ಮಾಡಿ ಎಂದರು.

ಅಂದು ನಾವು ಬೆಳೆಸಿದವರೇ ಅಂಬರೀಶ್ ಅವರನ್ನು ಮುಗಿಸಿದ್ದರು. ಈಗ ಇನ್ನೊಬ್ಬರನ್ನ ಮುಗಿಸಲು ಹೊರಟಿದ್ದಾರೆ. ಕುಮಾರಸ್ವಾಮಿ ನೆಗೆದುಬಿದ್ದು ಹೋಗುತ್ತೇನೆ ಎಂದು ಹೇಳುತ್ತಾರೆ. ನಾನು ಅಷ್ಟು ಸುಲಭವಾಗಿ ನೆಗೆದು ಬಿದ್ದು ಹೋಗಲ್ಲ. ನನ್ನ ಮಗ ನಿಮ್ಮ ಬಳಿ ಮತ ಹಾಕಿಸಿಕೊಂಡು ಎಲ್ಲೂ ಹೋಗಲ್ಲ ಇಲ್ಲೇ ಬದುಕುತ್ತಾನೆ, ಇಲ್ಲೇ ಮಣ್ಣಾಗುತ್ತಾನೆ ಎಂದು ಹೇಳಿದರು.

ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಸುಮಾರು ಒಂದುವರೆ ಲಕ್ಷ ರೂ. ಖರ್ಚು ಮಾಡಿ ತಯಾರಿಸಿದ್ದ 370 ಕೆಜಿ ತೂಕದ ಒಣದ್ರಾಕ್ಷಿ ಹಾರ ಹಾಕಿ ಸ್ವಾಗತ ಮಾಡಿದ್ದು ವಿಶೇಷವಾಗಿತ್ತು.

Comments

Leave a Reply

Your email address will not be published. Required fields are marked *