ರಾಜಕೀಯ ನಿವೃತ್ತಿ ನಿರ್ಧಾರ ಮಾಡಿದ್ದೆ – ಅಮೆರಿಕದಿಂದ ಸಿಎಂ ಹೇಳಿಕೆ

ಬೆಂಗಳೂರು: ಅಮೆರಿಕ ಪ್ರವಾಸದಲ್ಲಿ ಇರುವ ಮುಖ್ಯಮಂತ್ರಿಗಳು ತಾವು 2ನೇ ಬಾರಿಗೆ ಆಶ್ಚರ್ಯಕರವಾಗಿ ಸಿಎಂ ಆಗಿದ್ದು, ಇದು ಕಾಲಭೈರವೇಶ್ವರನ ಅನುಗ್ರಹವೇ ಕಾರಣ ಎಂದಿದ್ದಾರೆ.

ಅಮೆರಿಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರ ಆಡಿಯೋ ಲಭ್ಯವಾಗಿದ್ದು, ಈ ಆಡಿಯೋದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಆರೋಗ್ಯವನ್ನು ಲೆಕ್ಕಿಸದೆ ನಿರಂತರವಾಗಿ ಶ್ರಮವಹಿಸಿದ್ದೆ. ಫಲಿತಾಂಶದ ದಿನದಂದು ಕಾಲಭೈರವೇಶ್ವರನ ಪೂಜೆ ಮಾಡಿ ಬಂದಿದ್ದೆ. ಆದರೆ ಅಂದು ರಾಜ್ಯ ಜನ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆದರೆ ಆಶ್ಚರ್ಯ ರೀತಿಯಲ್ಲಿ ಕಾಂಗ್ರೆಸ್ ಪಕ್ಷದವರು ನೀವು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು. ಇದೇ ಕಾಲಭೈರವೇಶ್ವರನ ಅನುಗ್ರಹದಿಂದ ಅಚ್ಚರಿ ರೀತಿಯಲ್ಲಿ 2ನೇ ಬಾರಿಗೆ ಸಿಎಂ ಆಗಿದ್ದೇನೆ ಎಂದರು.

ಮೊದಲ ಬಾರಿ ಒಂದು ತರ ಸಿಎಂ ಆಗಿದ್ದೆ. ಎರಡನೇ ಬಾರಿ ಆಶ್ಚರ್ಯಕರವಾಗಿ ಸಿಎಂ ಆಗಿದ್ದೇನೆ. ನಾನು ಸಿಎಂ ಆಗಲು ಸ್ವಾಮೀಜಿಗಳ ಆರ್ಶೀವಾದ ಮತ್ತು ಪೂಜೆ ಕಾರಣ. ಚುನಾವಣೆ ಫಲಿತಾಂಶದ ದಿನ ಕಾಲಭೈರವೇಶ್ವನ ಪೂಜೆ ಇತ್ತು. ಸ್ವಾಮೀಜಿಗಳ ಸೂಚನೆ ಮೇಲೆ ಬೆಳಗ್ಗೆ 5.30 ಕ್ಕೆ ಎದ್ದು ಪೂಜೆ ಸಲ್ಲಿಸಿದೆ. ಪೂಜೆ ಮುಗಿಸಿ ಬಂದಾಗ ಫಲಿತಾಂಶ ನೋಡಿ ಇಷ್ಟೆಲ್ಲ ಕಷ್ಟ ಪಟ್ಟು ಹೀಗೆ ಆಯ್ತು ಎಂದು ಬೇಸರ ಆಯ್ತು. ಆರೋಗ್ಯದ ತೊಂದರೆ ನೋಡದೇ ಹೋರಾಟ ಮಾಡಿದೆ. ಆದರೆ ಜನ ನನ್ನನ್ನು ಒಪ್ಪಲಿಲ್ಲ ಎಂದು ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯಲು ಯೋಚನೆ ಮಾಡಿದ್ದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಅವಕಾಶ ಲಭಿಸಿತು ಎಂದರು.

10 ವರ್ಷಗಳ ಹಿಂದೆ ಬಾಲಗಂಗಾಧರ ಶ್ರೀಗಳು ನೀನೇ ಕಲಶ ಪೂಜೆ ಮಾಡಬೇಕು ಎಂದು ಹೇಳಿದ್ದರು. ಇವತ್ತು ನ್ಯೂಜೆರ್ಸಿಯಲ್ಲಿ ನಾನೇ ಪೂಜೆ ನೆರವೇರಿಸಿದ್ದೇನೆ. ಕನಸಲ್ಲೂ ನಾನು ಅಂದುಕೊಂಡಿರಲಿಲ್ಲ. ಕಾಲಭೈರವನ ಶಕ್ತಿ ಇಲ್ಲದೆ ಹೋಗಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಅಮೆರಿಕದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಹೇಳಿಕೆ ನೀಡಿದರು.

Comments

Leave a Reply

Your email address will not be published. Required fields are marked *