ಬಿಬಿಎಂಪಿ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಸಂಖ್ಯೆ ನೋಡಿದರೆ ನಾಚಿಕೆಯಾಗುತ್ತೆ- ಸಿಎಂ ಕುಮಾರಸ್ವಾಮಿ

ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳು ತೀರಾ ಕೊರತೆಯಲ್ಲಿವೆ. ಜೊತೆಗೆ ಇಲ್ಲಿನ ಖಾಯಂ ಶಿಕ್ಷಕರ ಸಂಖ್ಯೆ ನೋಡಿದರೆ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

ನಗರದ ಟೌನ್ ಹಾಲ್‍ನಲ್ಲಿ ಬಿಬಿಎಂಪಿಯ ಶಾಲಾ ಕಾಲೇಜುಗಳನ್ನು ಉನ್ನತೀಕರಿಸಲು ಮೈಕ್ರೋಸಾಫ್ಟ್ ಕಂಪನಿ ಸಹಯೋಗದ ‘ರೋಶಿನಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ, ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳನ್ನು ಗುಣಾತ್ಮಕ ಶಾಲೆಗಳಾಗಿ ಪರಿವರ್ತಿಸಬೇಕು ಎಂಬುದು ನಮ್ಮ ಕನಸಾಗಿತ್ತು. ಈಗ ಅದು ಸಾಕಾರಗೊಳ್ಳುತ್ತಿದೆ. ಸರ್ಕಾರಿ ಶಾಲೆ, ಬಿಬಿಎಂಪಿ ಶಾಲೆಗಳ ಬಗ್ಗೆ ಇದ್ದ ಅಪನಂಬಿಕೆ ಇಂದಿನಿಂದ ಬದಲಾವಣೆಯಾಗುತ್ತದೆ ಎಂದು ಭರವಸೆ ನೀಡಿದರು.

ಬಿಬಿಎಂಪಿ ಶಾಲೆಗಳು ಸರ್ಕಾರಿ ಶಾಲೆಗಳೆಂದರೆ ಪೋಷಕರಲ್ಲಿ ಒಂದು ಅಪನಂಬಿಕೆ ಇತ್ತು. ಆದರೆ ಈಗ ಆ ಅಪನಂಬಿಕೆಯನ್ನು ದೂರ ಮಾಡುವುದಕ್ಕೆ ಭರವಸೆ ಸಿಕ್ಕಿದೆ. ಬಿಬಿಎಂಪಿಯಲ್ಲಿ ನಾಲ್ಕು ಪ್ರಥಮ ದರ್ಜೆ ಕಾಲೇಜುಗಳಿದ್ದು, ಅದರಲ್ಲಿ ಶೇ. 91ರಷ್ಟು ಹೆಣ್ಣು ಮಕ್ಕಳಿದ್ದಾರೆ. ಆದರೆ ಇಲ್ಲಿ ಕೇವಲ ಐದು ಜನ ಮಾತ್ರ ಖಾಯಂ ಉಪನ್ಯಾಸಕರು ಇದ್ದಾರೆ. ಪ್ರಾಥಮಿಕ ಶಾಲೆ ಹಾಗೂ ಶಿಶು ವಿಹಾರ ಕೇಂದ್ರದಲ್ಲಿ ಶೇ. 1ರಷ್ಟು ಗಂಡು ಮಕ್ಕಳು ಜಾಸ್ತಿಯಾಗಿದ್ದಾರೆ. ಇದೂವರೆಗೂ ನನಗೆ ಇಲ್ಲಿಗೆ ಬರಲು ಆಗಿರಲಿಲ್ಲ. ಅದಕ್ಕಾಗಿ ಮಕ್ಕಳ ಬಳಿ ಕ್ಷಮೆ ಕೋರುತ್ತೇನೆ ಎಂದರು.

ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳು ಕೋರ್ಟ್ ಗಳಿಂದ ಹೇಳಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ಹಾಗೆ ಆಗಬಾರದು. ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡುತ್ತೇನೆ. ಇಂಜಿನಿಯರ್ ಅಥವಾ ಬೇರೆ ಯಾವುದೇ ಅಧಿಕಾರಿಗಳೇ ಆಗಿರಲಿ ಕೋರ್ಟ್ ಗಳಿಂದ ಛೀಮಾರಿ ಹಾಕಿಸಿಕೊಳ್ಳುವ ಮೊದಲು, ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.

ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸದ್ಯ ತಾತ್ಕಾಲಿಕ ತಡೆ ನೀಡಲಾಗಿದ್ದು, ಜನರಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳುತ್ತೇವೆ. ದರ ಏರಿಕೆಯಿಂದ ಪ್ರಯಾಣಿಕರಿಗೆ ಹೊರೆಯಾಗದಂತೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *