ಸಿಎಂ ಆಗಿರೋವಾಗ ನೀವಿರೋದು ನನ್ನ ಜೀವನದ ಅವಿಸ್ಮರಣೀಯ ಕ್ಷಣ: ಸ್ಪೀಕರ್ ಗೆ ಎಚ್‍ಡಿಕೆ ಅಭಿನಂದನೆ

ಬೆಂಗಳೂರು: ನೂತನ ಸ್ಪೀಕರ್ ಆಗಿ ಆಯ್ಕೆಯಾದ ಕೆ.ಆರ್.ರಮೇಶ್‍ಕುಮಾರ್ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ಬಳಿಕ ಸದನದಲ್ಲಿ ಮಾತನಾಡಿದ ಅವರು, ಐದು ವರ್ಷಗಳ ನಡೆಸುವ ನಮ್ಮ ಸರ್ಕಾರಕ್ಕೆ ಸೂಕ್ತ ಮಾರ್ಗವನ್ನು ತೋರಿಸಬೇಕು. ನಿಮ್ಮ ಅನುಭವ ಎಲ್ಲರಿಗೂ ಮಾದರಿಯಾಗಿರಬೇಕು. ಇಂದು ನೀವು ನಮ್ಮೊಂದಿಗೆ ನೀವಿರುವುದು ನಮ್ಮೆಲ್ಲರ ಸೌಭಾಗ್ಯ. ವಿರೋಧ ಪಕ್ಷದ ನಾಯಕರು ಸಹ ನಿಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಿದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

1994ರಲ್ಲಿ ನೀವು ಸ್ಪೀಕರ್ ಆಗಿದ್ದಾಗ ನನ್ನ ಸ್ಥಾನದಲ್ಲಿ ನಮ್ಮ ತಂದೆಯವರಾದ ದೇವೇಗೌಡರು ಇದ್ದರು. ಇಂದು ಕಾಕತಾಳೀಯವಾಗಿ ಆ ಸ್ಥಾನದಲ್ಲಿ ನಾನಿದ್ದೇನೆ. ಹಾಗಾಗಿ ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಅಂತಾ ಬಣ್ಣಿಸಿದ್ರು.

ಇದೇ ವೇಳೆ ಮೈಸೂರು ರಾಜರ ಆಳ್ವಿಕೆಯನ್ನು ಮೆಲಕು ಹಾಕಿಕೊಂಡ ಎಚ್‍ಡಿಕೆ ದೇಶದಲ್ಲಿಯೇ ಮೈಸೂರು ಆಳ್ವಿಕೆಗೆ ಹೆಸರು ವಾಸಿಯಾಗಿದೆ. ಸದನದ ಘನತೆ ಗೌರವವನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಅಂತಾ ಹೇಳಿದ್ರು.

ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನೀವು ಸ್ಪೀಕರ್ ಆಗಿ ಆಯ್ಕೆಯಾಗಿರುವುದು ನಮ್ಮಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಪೀಕರ್ ಸ್ಥಾನ ಅತಿ ದೊಡ್ಡ ಸ್ಥಾನ ಆಗಿರುವದರಿಂದ ನಮ್ಮ ಅಭ್ಯರ್ಥಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. 1994 ರಿಂದ 99ರಲ್ಲಿಯೂ ನೀವು ಸ್ಪೀಕರ್ ಆಗಿ ಕೆಲಸ ಮಾಡಿರುವುದನ್ನು ನಾವು ನೋಡಿದ್ದೇವೆ. ನಿಮಗೆ ಪಕ್ಷದ ಎಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಅಂತಾ ತಿಳಿಸಿದ್ರು.

Comments

Leave a Reply

Your email address will not be published. Required fields are marked *