ಹಂದಿ ತಿಂದು ಮಸೀದಿಗೆ ಹೋಗ್ಲಿ, ಅಹಂಕಾರಿ ಸಿಎಂಗೆ ಆ ಧೈರ್ಯ ಇದ್ಯಾ: ಸೊಗಡು ಶಿವಣ್ಣ ಸವಾಲು

ತುಮಕೂರು: ಮೀನಿನ ಖಾದ್ಯ ಸೇವಿಸಿ ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ತಾಕತ್ತಿದ್ದರೆ ಹಂದಿ ಮಾಂಸ ಸೇವಿಸಿ ಮಸೀದಿಗೆ ಭೇಟಿ ನೀಡಲಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿರುಗೇಟು ನೀಡಿದ್ದಾರೆ.

ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಅಹಂಕಾರ ಇದ್ದು, ಹಾಗಾಗಿಯೇ ಅವರು ಈ ರೀತಿ ಧರ್ಮ-ಧರ್ಮಗಳ ನಡುವೆ ಜಗಳವನ್ನು ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ ಸಿಎಂ ತಮ್ಮ ತಾಕತ್ತನ್ನು ಒಳ್ಳೆಯ ಕೆಲಸಗಳನ್ನು ಮಾಡುವುದರಲ್ಲಿ ಉಪಯೋಗಿಸಿಕೊಳ್ಳಲಿ ಎಂದು ಸಲಹೆಯನ್ನು ನೀಡಿದರು.

ಸಿಎಂ ಸಿದ್ದರಾಮಯ್ಯ ಮೀನು ಮಾಂಸ ಸೇವಿಸಿ ಮಂಜುನಾಥನ ದರ್ಶನ ಪಡೆದಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯನವರು ಧಾರವಾಡದ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ದೇವರು ಮಾಂಸ ಆಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಿಲ್ಲ. ಬೇಡರ ಕಣ್ಣಪ್ಪ ಕೂಡಾ ಶಿವನಿಗೆ ಜಿಂಕೆ ಮಾಂಸ ನೈವೇದ್ಯ ಮಾಡಿದ್ದ. ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ಎಂದು ಹೇಳಿದ್ದರು.

ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ ಬಂಟ್ವಾಳದಲ್ಲಿ ಕಾರ್ಯಕ್ರಮ ಮುಗಿಸಿ, ಬಂಟ್ವಾಳ ಐಬಿಯಲ್ಲಿ ಕರಾವಳಿ ಖಾದ್ಯ ಮೀನಿನ ಊಟವನ್ನು ಸೇವಿಸಿದ್ದರು. ಆ ಬಳಿಕ ಸಿಎಂ ನೇರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು. ಈ ವಿಚಾರದ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಎಂ ನಡೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *