ಸಿಎಂ ಉತ್ತರ ಕರ್ನಾಟಕ ಭಾಗದವರನ್ನು ನೋಡಿದರೆ ಉರಿದು ಬೀಳ್ತಾರೆ: ಶ್ರೀರಾಮುಲು

ವಿಜಯಪುರ: ಮುಖ್ಯಮಂತ್ರಿಗಳು ತಾಳ್ಮೆಯಿಂದ ಇರಬೇಕಾಗಿತ್ತು. ಉತ್ತರ ಕರ್ನಾಟಕ ಭಾಗದವರನ್ನು ನೋಡಿದರೆ ಉರಿದು ಬೀಳುತ್ತಾರೆ. ಕಾವೇರಿ ಹೋರಾಟಗಳಿಗೆ ಬ್ರದರ್ ಎಂದು ಸ್ಪಂದಿಸುವ ಸಿಎಂ ಉತ್ತರ ಕರ್ನಾಟಕ ಭಾಗದ ಕೃಷ್ಣಾ, ತುಂಗಭದ್ರಾ, ಘಟಪ್ರಭಾ ಹೋರಾಟಗಳಿಗೆ ಯಾಕೆ ಸ್ಪಂದಿಸಲ್ಲ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ತಂದೆ ಹಾಗೂ ಪುತ್ರನ ಸೋಲಿನ ಸಿಟ್ಟನ್ನು ಉತ್ತರ ಕರ್ನಾಟಕ ಜನರ ಮೇಲೆ ಹಾಕುತ್ತಿದ್ದಾರೆ ಎಂದು ಜರಿದರು. ಮಧ್ಯಂತರ ಚುನಾವಣೆ ಹೇಳಿಕೆಗಳು ಕಾಂಗ್ರೆಸ್ ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ ನಾಟಕ. ಸಿದ್ದರಾಮಯ್ಯ ವರ್ಚಸ್ಸು ಕಳೆದುಕೊಂಡಿದ್ದಾರೆ. ಅವರ ತವರು ಜಿಲ್ಲೆ ಹಳೆಯ ಮೈಸೂರಲ್ಲೂ ವರ್ಚಸ್ಸಿಲ್ಲ. ಸಿದ್ದು ಅಂತ್ಯಕಾಲ ಆರಂಭವಾಗಿದೆ ಎಂದರು.

ಅಲ್ಲದೆ ಸಿದ್ದರಾಮಯ್ಯನವರಿಗಿಂತಲೂ ಹಳೆಯ ಕಾಂಗ್ರೆಸ್ ನಾಯಕರು ರೋಷನ್ ಬೇಗ್ ಅವರಂಥ ಹಿರಿಯ ಕೈ ನಾಯಕರನ್ನು ಉಚ್ಛಾಟಿಸಿದ್ದು ಸಿದ್ದರಾಮಯ್ಯ ಹಠಕ್ಕೆ ಸಾಕ್ಷಿ ಎಂದು ಬೇಗ್ ಪರ ಬ್ಯಾಟಿಂಗ್ ಮಾಡಿದರು. ಕಾಂಗ್ರೆಸ್‍ನಲ್ಲಿ ನಂದೇ ನಡೆಯಬೇಕೆಂಬುದು ಸಿದ್ದರಾಮಯ್ಯ ಹಠ. ಮೈತ್ರಿ ಸರ್ಕಾರ ನಡೆಸಲು ಆಗದಿದ್ದರೆ ಅಧಿಕಾರ ಬಿಟ್ಟು ಕೊಡಿ. ನಾವು ಸರ್ಕಾರ ರಚಿಸಲು ರಾಜ್ಯಪಾಲರನ್ನು ಕೇಳುತ್ತೇವೆ. ಅವರು ಅವಕಾಶ ಕೊಟ್ಟರೆ ಸರ್ಕಾರ ರಚಿಸುತ್ತೇವೆ ಎಂದರು.

ಪ್ರಸನ್ನಾನಂದಪುರಿ ವಾಲ್ಮೀಕಿ ಸ್ವಾಮೀಜಿ ಸಿಎಂ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಪ್ರಸನ್ನಾನಂದಪುರಿ ಸ್ವಾಮಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಅದಕ್ಕೆ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದೇವು. ಯಾರನ್ನು ಅಪಮಾನ ಮಾಡುವ ಕೆಲಸ ಸ್ವಾಮೀಜಿ ಮಾಡಿಲ್ಲ ಎಂದು ಸ್ವಾಮಿಜಿಗಳನ್ನು ಸಮರ್ಥಿಸಿಕೊಂಡರು. ಅಲ್ಲದೆ ಅಪ್ಪ ಎಂದರೆ ಉತ್ತರ ಕರ್ನಾಟಕದಲ್ಲಿ ತಂದೆಗೆ ಸಮಾನ ಅಷ್ಟೇ ಎಂದು ಸ್ವಾಮಿಜಿ ಹೇಳಿಕೆಗೆ ಸಮಾಜಾಯಿಸಿ ಕೊಟ್ಟರು.

Comments

Leave a Reply

Your email address will not be published. Required fields are marked *