ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ಪ್ರವಾಸ – ಮುಧೋಳದಲ್ಲಿ ಬೆಳ್ಳಂಬೆಳಗ್ಗೆ ಸಿಎಂ ಸುತ್ತಾಟ

ಬಾಗಲಕೋಟೆ: ರಾಜ್ಯದಲ್ಲಿ ಮಳೆಯ ಹಬ್ಬರ ಮುಂದುವರಿದಿದ್ದು, ರಾಜ್ಯ ಸರ್ಕಾರದಿಂದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ಹಾಗೂ ಅಗತ್ಯ ಪರಿಹಾರ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಂದು ಕೂಡ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರವಾಹ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಇಂದು ಬೆಳಗ್ಗೆಯೇ ಬಾಗಲಕೋಟೆಯಲ್ಲಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡುವ ಕಾರ್ಯವನ್ನು ಸಿಎಂ ಬಿಎಸ್‍ವೈ ಆರಂಭಿಸಿದರು. ಬೆಳಗ್ಗೆ ವಾಯುವಿಹಾರದೊಂದಿಗೆ ಮೂರು ಕಿಮೀ ನಡೆದು ಸಾಗಿದ ಸಿಎಂ ಅವರು ಜಿಲ್ಲೆಯ ಮುದೋಳದ ನಿರಾಣಿ ಶಾಲೆಯಲ್ಲಿದ್ದ ಸಂತ್ರಸ್ತರನ್ನು ಭೇಟಿ ಮಾಡಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾಡಳಿತ ಶಕ್ತಿ ಮೀರಿ ಹಗಲು, ರಾತ್ರಿ ಕೆಲಸ ಮಾಡುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 63 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. ಸದ್ಯ ಇಲ್ಲಿ ಸುಮಾರು 6,381 ಕುಟುಂಬಗಳನ್ನು ಸ್ಥಳಾಂತರ ಮಾಡಿದ್ದೇವೆ. ಒಟ್ಟು 28,126 ಜನರನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ 42 ಪರಿಹಾರ ಕೇಂದ್ರ ತೆರೆಯಲಾಗಿದೆ. ಪ್ರವಾಹ ಪರಿಸ್ಥಿತಿಯಿಂದ ರೈತರಿಗೆ ಉಂಟಾಗಿರುವ ನಷ್ಟವನ್ನು ತುಂಬಿಕೊಡುವ ಕಾರ್ಯವನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇನ್ನು ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಬಾಗಲಕೋಟೆ ಜಿಲ್ಲೆಗೆ ಹೆಚ್ಚುವರಿಯಾಗಿ 10 ಕೋಟಿ ರೂ.ಗಳನ್ನ ಪರಿಹಾರ ಕಾರ್ಯ ಕೈಗೊಳ್ಳಲು ನೀಡಿದ್ದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಧ್ಯಮಗಳು ಉತ್ತಮ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಈ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಉಳಿದಂತೆ ಬಾಗಲಕೋಟೆಯಲ್ಲಿ ಇಂದು ಪ್ರವಾಹ ಪರಿಸ್ಥಿತಿಯನ್ನು ವೀಕ್ಷಣೆಯನ್ನು ಸಿಎಂ ಮಾಡುತ್ತಾರೆ. ಹೆಲಿಕಾಪ್ಟರ್ ನಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ತ್ರಿವಳಿ ನದಿಗಳ ಪ್ರವಾಹದ ವೈಮಾನಿಕ ಸಮೀಕ್ಷೆಯನ್ನು ನಡೆಸುತ್ತಾರೆ. ಮಧ್ಯಾಹ್ನದ ಬಳಿಕ ಗದಗ ಜಿಲ್ಲೆ ಕೊಣ್ಣೂರ, ನರಗುಂದಗೆ ತೆರಳಲಿರುವ ಸಿಎಂ ಅಲ್ಲಿಯೂ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಣೆ ಮಾಡುತ್ತಾರೆ.

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಯಲ್ಲಿ ಉಂಟಾಗಿರುವ ಪ್ರವಾಹ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೈಲಾದಷ್ಟು ಹಣಕಾಸು ನೆರವು ನೀಡುವಂತೆ ಮನವಿ ಮಾಡಿದ ಅವರು, ಇದುವರೆಗೂ ಸುಧಾ ಮೂರ್ತಿಯವರು 10 ಕೋಟಿ ರೂ.ಗಳನ್ನು ಪರಿಹಾರ ನೀಡಿದ್ದಾರೆ. ಮುರುಗೇಶ್ ನಿರಾಣಿ ಅವರು ತಮ್ಮ ಸಂಸ್ಥೆಯಿಂದ 1 ಕೋಟಿ ರೂ. ಹಾಗೂ ಕೆಎಂಎಫ್ ನಿಂದ 1 ಕೋಟಿ ರೂ. ನೀಡಿದಾರೆ. ವಿವಿಧ ಸಂಸ್ಥೆಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡುವೆ ಎಂದು ಮಾಹಿತಿ ನೀಡಿದರು.

ಸರ್ಕಾರಕ್ಕೆ ದೇಣಿಗೆ ಕೊಡಬಹುದಾದ ಬ್ಯಾಂಕ್ ಖಾತೆ ವಿವರ ಈ ರೀತಿ ಇದೆ.
ಯಾರಿಗೆ – ಮುಖ್ಯಮಂತ್ರಿಯವರ ನೈಸರ್ಗಿಕ ವಿಕೋಪ ನಿಧಿ
ಖಾತೆ ಸಂಖ್ಯೆ – 37887098605
ಬ್ಯಾಂಕ್ ಮತ್ತು ಶಾಖೆ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಧಾನಸೌಧದ ಶಾಖೆ
ಐಎಫ್‍ಎಸ್‍ಸಿ ಕೋಡ್ – ಎಸ್‍ಬಿಐಎನ್0040277
ವಿಳಾಸ – ನಂ.235-ಎ, 2ನೇ ಮಹಡಿ, ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು, 1

Comments

Leave a Reply

Your email address will not be published. Required fields are marked *