ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಎಸ್‍ವೈ – ವೇದಿಕೆ ಮೇಲೆಯೇ ಸ್ವಾಮೀಜಿ ವಿರುದ್ಧ ಕೆಂಡಾಮಂಡಲ

ದಾವಣಗೆರೆ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದಲ್ಲೊಂದು ಸಮಸ್ಯೆ ಬರುತ್ತಲೇ ಇವೆ. ಅದರಲ್ಲೂ ಸಚಿವ ಸ್ಥಾನ ತಮ್ಮ ಸಮಾಜದವರಿಗೆ ನೀಡಿ ಎಂದು ಅಯಾ ಸಮಾಜದ ಸ್ವಾಮೀಜಿಗಳು ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರಿದ 15 ಜನರಿಗೆ ಸಚಿವ ಸ್ಥಾನ ನೀಡಬೇಕೋ ಮತ್ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಗೊಂದಲದಲ್ಲಿ ಸಿಎಂ ಯಡಿಯೂರಪ್ಪನವರು ಇದ್ದಾರೆ. ಇದೇ ವಿಚಾರವಾಗಿ ಸಿಎಂ ಇಂದು ಪಂಚಮಸಾಲಿ ಮಠದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಸ್ವಾಮೀಜಿಗಳ ಮೇಲೆಯೇ ಗರಂ ಆದ ಪ್ರಸಂಗ ನಡೆಯಿತು.

ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಹರ ಜಾತ್ರೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಅವರು ಕೆಂಡಾಮಂಡಲವಾದ ಪ್ರಸಂಗ ನಡೆಯಿತು. ಮೊದಲು ಮಾತನಾಡಿದ ವಚನಾನಂದ ಶ್ರೀಗಳು, ನೀವು ಪವರ್ ಫುಲ್ ಮುಖ್ಯಮಂತ್ರಿಯಾಗಿರುವುದರಿಂದ ಪಂಚಮಸಾಲಿ ಸಮಾಜಕ್ಕೆ ಮೂರು ಜನ ಸಚಿವರನ್ನಾಗಿ ಮಾಡಬೇಕು. ಪ್ರಥಮ ಪ್ರಾಶಸ್ತ್ಯವನ್ನು ಮುರುಗೇಶ್ ನಿರಾಣಿಗೆ ಕೊಡಬೇಕು. ಇಲ್ಲದಿದ್ದರೆ ಸಮಾಜ ನಿಮ್ಮನ್ನು ಕೈಬಿಡುತ್ತದೆ ಎಂದು ಹೇಳಿದರು.

ಶ್ರೀಗಳ ಹೇಳಿಕೆಯಿಂದ ಕೆಂಡಾಮಂಡಲವಾದ ಸಿಎಂ, ನೀವು ಹೀಗೆ ಮಾತನಾಡಿದರೆ ನಾನು ಎದ್ದು ಹೋಗುತ್ತೇನೆ ಎಂದು ಗುಡುಗಿದರು. ಆಗ ಶ್ರೀಗಳು ಸಮಾಧಾನದ ಮಾತನಾಡಿ, ನಾವು ಸತ್ಯವನ್ನೇ ಹೇಳುತ್ತಿದ್ದೇವೆ. ಕುಳಿತುಕೊಳ್ಳಿ ಎಂದು ಹೇಳಿದರು. ಆದರೆ ಇದಕ್ಕೆ ಒಪ್ಪದ ಸಿಎಂ, ದಯವಿಟ್ಟು ಕ್ಷಮಿಸಿ, ತಾವು ಈ ಮಾತು ಆಡಬಾರದು. ನಿಮ್ಮ ಬಾಯಲ್ಲಿ ಈ ತರ ಮಾತುಗಳು ಬರಬಾರದು. ಹೀಗೆ ಮಾತನಾಡಿದರೆ ನಾನು ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ನೀವು ಸಲಹೆ ಕೊಡಬಹುದು ಅಷ್ಟೇ ಎಂದರು.

ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿಗಳು, ನಾವು ಸಲಹೆ ಕೊಡುತ್ತಿದ್ದೇವೆ ಎಂದರು. ಆಗ ಸಿಎಂ ಬೆದರಿಸಬೇಡಿ ಎಂದು ಗರಂ ಆದರು. ಈ ವೇಳೆ ಸ್ವಾಮೀಜಿಗಳು, ನಾವು ಬೆದರಿಸುತ್ತಿಲ್ಲ. ನಮ್ಮ ಹಕ್ಕು, ನ್ಯಾಯವನ್ನು ಕೇಳುತ್ತಿದ್ದೇವೆ ಎಂದು ಗುಡುಗಿದರು. ಆಗ ಸಿಎಂ ಶಾಂತರಾಗಿ ಆಸನದ ಮೇಲೆ ಕುಳಿತರು. ಮತ್ತೆ ಮಾತು ಮುಂದುವರಿಸಿದ ಶ್ರೀಗಳು, ಇದು ನಮ್ಮ ಬೇಡಿಕೆಯಲ್ಲ. ಸಮಾಜದ ಕೂಗು. ನೀವು ಸಮಾಧಾನದಿಂದ ಕೇಳಬೇಕು ಎಂದರು.

ಬಳಿಕ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ ಅವರು, ನಾನು ಕುರ್ಚಿಗೆ ಅಂಟಿಕೊಂಡು ಕೂತ್ತಿಲ್ಲ. ಬೇಕಾದ್ರೆ ನಾಳೆಯೇ ರಾಜೀನಾಮೆ ಕೊಡುತ್ತೇನೆ. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ನೇರವಾಗಿಯೇ ಅಸಮಾಧಾನ ಹೊರ ಹಾಕಿದರು.

ಎಲ್ಲಾ ಸಮಾಜದ ಶ್ರೀಗಳು ದಯವಿಟ್ಟು ಅರ್ಥ ಮಾಡಿಕೊಳ್ಳಬೇಕು. ಹದಿನೇಳು ಶಾಸಕರು ರಾಜೀನಾಮೆ ನೀಡಿ ವನವಾಸ ಅನುಭವಿಸಿದ್ದಾರೆ. ಅವರಿಗೆ ನ್ಯಾಯ ನೀಡಬೇಕಾಗಿದೆ, ದಯವಿಟ್ಟು ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನನಗೆ ಅಧಿಕಾರದ ಆಸೆ ಇಲ್ಲ. ಬೇಕಿದ್ದರೆ ರಾಜೀನಾಮೆ ಕೊಟ್ಟು ಬರುತ್ತೇನೆ. ಹದಿನೇಳು ಶಾಸಕರ ಋಣ ತೀರಿಸಬೇಕಿದೆ. ಹೀಗಾಗಿ ಎಲ್ಲಾ ಸ್ವಾಮೀಜಿಗಳನ್ನ ಸೇರಿಸೋಣ, ನನ್ನ ಪರಿಸ್ಥಿತಿ ನಿಮಗೆಲ್ಲರಿಗೂ ಅರ್ಥ ಮಾಡಿಸುತ್ತೇನೆ ಎಂದು ಬೇಸರ ಹೊರಹಾಕಿದರು.

Comments

Leave a Reply

Your email address will not be published. Required fields are marked *