ಟ್ರಾಫಿಕ್ ಕ್ಲಿಯರ್ ಮಾಡಿದ ಸಿಎಂ ಬಿಎಸ್‍ವೈ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ರಾಫಿಕ್ ಕ್ಲಿಯರ್ ಮಾಡಿ ಸರಳತೆ ಮೆರೆದಿದ್ದಾರೆ.

ಸಿಎಂ ಯಡಿಯೂರಪ್ಪ ಪೇಜಾವರ ಶ್ರೀಗಳನ್ನು ಭೇಟಿಯಾಗಲು ನಗರದ ಧವಳಗಿರಿ ನಿವಾಸದಿಂದ ಬನಶಂಕರಿಗೆ ಹೊರಟಿದ್ದರು. ಹೀಗಾಗಿ ಝೀರೋ ಟ್ರಾಫಿಕ್ ಕಲ್ಪಿಸಲಾಗಿತ್ತು. ಡಾಲರ್ಸ್ ಕಾಲೋನಿ ಬಳಿ ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಪೊಲೀಸರು ವಾಹನ ಸಂಚಾರ ತಡೆದಿದ್ದರು. ಈ ವೇಳೆ ವಾಹನ ಚಾಲಕರು ಹಾಗೂ ಸವಾರರು ಹಾರ್ನ್ ಮಾಡಲು ಆರಂಭಿಸಿದರು.

ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಸಿಎಂ ಬಿಎಸ್ ಯಡಿಯೂರಪ್ಪನವರು ಪೊಲೀಸರನ್ನು ಕರೆದು ಅವರನ್ನು ಹೋಗಲು ಬಿಡಿ ಎಂದು ಸೂಚನೆ ನೀಡಿದರು. ಅಷ್ಟೇ ಅಲ್ಲ ಖುದ್ದಾಗಿ ಕೈ ಬೀಸಿ ಹೋಗಿ… ಹೋಗಿ… ಎಂದು ಚಾಲಕರು ಹಾಗೂ ಸವಾರರಿಗೆ ತಿಳಿಸಿದರು. ಎಲ್ಲರೂ ಹೋದ ಬಳಿಕ ಸಿಎಂ ಅಲ್ಲಿಂದ ಪ್ರಯಾಣ ಆರಂಭಿಸಿದರು.

ಸಿಎಂ ಯಡಿಯೂರಪ್ಪ ಅವರು ಐದು ನಿಮಿಷ ಕಾದು ನಿಂತು ಸರಳತೆ ಮೆರತೆದಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದಕ್ಕೂ ಮುನ್ನ ಎಚ್.ಡಿ.ದೇವೇಗೌಡ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಸುಪ್ರೀಂಕೋರ್ಟ್ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಅನುಕೂಲಕ್ಕೆ ತಕ್ಕಂತೆ ತೀರ್ಪು ಕೊಡಬೇಕಿತ್ತಾ? ದೇವೇಗೌಡರ ಪ್ರತಿಯೊಂದ ಶಬ್ದಕ್ಕೂ ಗೌರವ ಇದೆ. ಸುಪ್ರೀಂಕೋರ್ಟ್ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ? ಅವರಿಂದ ಇಂತಹ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ದೇವೇಗೌಡರ ಹೇಳಿಕೆಯಿಂದ ನನಗೆ ತುಂಬ ನೋವಾಗಿದೆ. ಅವರು ತಮ್ಮ ಹೇಳಿಕೆ ವಾಪಸ್ ತೆಗೆದುಕೊಳ್ಳಲಿ ಎಂದು ಹೇಳಿದರು.

ವಿಪಕ್ಷಗಳು ಅನಗತ್ಯವಾಗಿ ಸುಪ್ರೀಂಕೋರ್ಟ್ ತೀರ್ಮಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ತೀರ್ಪು ಬರುವವರೆಗೂ ಕಾದು ನೋಡಿ ಮಾತನಾಡಬೇಕು. ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ ಎಂದು ತಿಳಿದರು.

ಉಪಚುನಾವಣೆಗೆ ತಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಸುಪ್ರೀಂಕೋರ್ಟ್ ಕೂಲಂಕುಶವಾಗಿ ಪರಿಶೀಲನೆ ಮಾಡಿ ಅನರ್ಹ ಶಾಸಕರ ಬಗ್ಗೆ ತೀರ್ಮಾನ ಕೈಗೊಂಡಿದೆ. ಚುನಾವಣೆಯನ್ನು ಮುಂದಿನ ತಿಂಗಳು 22 ರವರೆಗೆ ವಿಚಾರಣೆ ಮುಂದೂಡಿದೆ. ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಉಪ ಚುನಾವಣೆ ತಡೆಯಿಂದ ಅನರ್ಹ ಶಾಸಕರಿಗೆ ರಿಲೀಫ್ ಸಿಕ್ಕಿದೆ ಎಂದರು.

Comments

Leave a Reply

Your email address will not be published. Required fields are marked *