ರಾಜ್ಯಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ – ಸಿಎಂ ಪತ್ನಿಯಿಂದ ಸಾಂಪ್ರದಾಯಿಕ ಸ್ವಾಗತ

ಬೆಂಗಳೂರು: ಕೇಂದ್ರದ ಗೃಹ ಸಚಿವ ಅಮಿತ್ ಶಾ ಭೇಟಿ ಬೆನ್ನಲ್ಲೇ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ ಸ್ಮೃತಿ ಇರಾನಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರೇಸ್‍ವೀವ್ ಸರ್ಕಾರಿ ನಿವಾಸದಲ್ಲಿ ಔಪಚಾರಿಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಮುಖ್ಯಮಂತ್ರಿಯವರ ಪತ್ನಿ ಚೆನ್ನಮ್ಮ ಅವರು ಸಂಪ್ರದಾಯದಂತೆ ಅರಿಶಿನ ಕುಂಕುಮ ಹಾಗೂ ಉಡುಗೊರೆ ನೀಡಿ ಸತ್ಕರಿಸಿದರು. ಈ ವೇಳೆ ಕಂದಾಯ ಸಚಿವ ಆರ್. ಅಶೋಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವ ಡಾ. ಮುಂಜ್ಪಾರಾ ಮಹೇಂದ್ರಭಾಯಿ ಕಾಲುಭಾಯಿ ಉಪಸ್ಥಿತರಿದ್ದರು.

ಬಳಿಕ ಸ್ಮೃತಿ ಇರಾನಿಯವರು ಖಾಸಗಿ ಹೊಟೇಲಿನಲ್ಲಿ ದಕ್ಷಿಣ ರಾಜ್ಯಗಳ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆಗಳ ಸಚಿವರು, ಇಲಾಖೆ ಹಿರಿಯ ಅಧಿಕಾರಿಗಳು, ವಿವಿಧ ಎನ್‍ಜಿಒಗಳ ಜತೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿದ ಸ್ಮೃತಿ ಇರಾನಿ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ವಿದ್ಯುತ್ ಶಾಕ್ – ಯೂನಿಟ್‍ಗೆ 35 ಪೈಸೆ ಹೆಚ್ಚಳ

ಅಂಗನವಾಡಿ ಕಾರ್ಯಕರ್ತೆಯರ ವೇತನ ಸಮಸ್ಯೆ ಬಗ್ಗೆ ಮಾತಾಡಿದ ಸಚಿವೆ, ಕೇಂದ್ರದಿಂದ ಅಂಗಗನವಾಡಿ ಕಾರ್ಯಕರ್ತೆಯರಿಗೆ 4500 ಗೌರವ ಧನ ನೀಡಲಾಗ್ತಿದೆ. 180 ದಿನ ಮೆಟರ್ನಿಟಿ ರಜೆ, 20 ದಿನ ವೇತನ ಸಹಿತ ರಜೆ, ಇತರೆ ಸೌಕರ್ಯ ನೀಡಲಾಗ್ತಿದೆ. ಈ ಸಂಬಂಧ ಅನುದಾನವನ್ನು ಕೇಂದ್ರದಿಂದ ರಾಜ್ಯಗಳಿಗೆ ತಲುಪಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸಮರ್ಥ ಆರ್ಥಿಕ ವ್ಯವಸ್ಥೆ ಮೂಲಕ ಗೌರವ ಧನ ಕೊಡಲಾಗ್ತಿದೆ. ಇದರಲ್ಲಿ ಯಾವುದೇ ರೀತಿಯ ವಿಳಂಬ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ದೇಶದ ಅಂಗನವಾಡಿಗಳಿಗೆ ಸ್ಮಾರ್ಟ್ ಉಕಪರಣಗಳನ್ನ ಕೊಡಲಾಗ್ತಿದೆ. ಸದ್ಯ 11 ಲಕ್ಷ ಸ್ಮಾರ್ಟ್ ಉಪಕರಣಗಳನ್ನು ಒದಗಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಅಪೌಷ್ಟಿಕತೆ ತೊಲಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ. ಹೆಣ್ಣಿನ ಲಿಂಗಾನುಪಾತ 918 ರಿಂದ 937 ಕ್ಕೆ ಲಿಂಗಾನುಪಾತ ಹೆಚ್ಚಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ಅವಘಡ- ವರ ಸಾವು, ವಧು ಗಂಭೀರ

ಪ್ರತೀ ಜಿಲ್ಲೆಯಲ್ಲೂ ಮಹಿಳಾ ಸಹಾಯ ಕೇಂದ್ರ ತೆರೆಯಲಾಗಿದೆ. ಮಹಿಳೆಯರ ವಿರುದ್ಧದ ಎಲ್ಲ ದೌರ್ಜನ್ಯಗಳಿಗೆ ಪರಿಹಾರ ಒದಗಿಸಲು ಮಹಿಳಾ ಸಹಾಯ ಕೇಂದ್ರ ತೆರೆಯಲಾಗಿದೆ. ಸದ್ಯ 704 ಇಂತಹ ಮಹಿಳಾ ಸಹಾಯ ಕೇಂದ್ರಗಳು ಕೆಲಸ ಮಾಡ್ತಿವೆ. 70 ಲಕ್ಷ ಮಹಿಳೆಯರಿಗೆ ಈ ಸಹಾಯ ಕೇಂದ್ರಗಳಿಂದ ನೆರವು ದೊರೆತಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಸಂಬಂಧ ನಿಯಮಗಳನ್ನು ಮತ್ತಷ್ಟು ಕಠಿಣ ಮಾಡಿದ್ದೇವೆ. ಜನಧನ ಯೋಜನೆಯಡಿ 24 ಕೋಟಿ ಮಹಿಳೆಯರಿಗೆ ಬ್ಯಾಂಕ್ ಖಾತೆ ಹೊಂದಿದ್ದಾರೆ. 32 ಕೋಟಿ ಲೋನ್ ಅನ್ನು ಮುದ್ರಾ ಯೋಜನೆಯಡಿ ನೀಡಲಾಗಿದೆ.ಈ ಸಾಲ ಸೌಲಭ್ಯದಲ್ಲಿ 68% ಮಹಿಳೆಯರ ಪಾಲಿದೆ. ಬ್ಯಾಂಕ್ ಸಖೀ ಯೋಜನೆಯಡಿ 8 ಕೋಟಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವು ನೀಡಲಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು. ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ಪೊಲೀಸ್ ಪೇದೆ: ಫೋಟೋ ವೈರಲ್

Comments

Leave a Reply

Your email address will not be published. Required fields are marked *