ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ

ಬೆಂಗಳೂರು: ಬಿಜೆಪಿ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ ಬೆನ್ನಲ್ಲೇ ಕೆಲ ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ಪ್ರಮುಖವಾಗಿ ಸಚಿವರಾದ ಎಂಟಿಬಿ ನಾಗರಾಜ್, ವಿ.ಸೋಮಣ್ಣ, ಮಾಧುಸ್ವಾಮಿ ಸೇರಿದಂತೆ ಕೆಲ ಸಚಿವರು ಕ್ಯಾತೆ ತೆಗೆದಿದ್ದಾರೆ.

ಚಿಕ್ಕಬಳ್ಳಾಪುರ ಉಸ್ತುವಾರಿಗೆ ಸಚಿವರಾಗಿರುವ ಎಂಟಿಬಿ ನಾಗರಾಜ್ ನನಗೆ ಬೆಂಗಳೂರು ಗ್ರಾಮಾಂತರದ ಉಸ್ತುವಾರಿ ಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದಾರೆ. ಇನ್ನೊಂದೆಡೆ ಜಿಲ್ಲೆಯ ಪೂರ್ವಾಪರ ಗೊತ್ತಿಲ್ಲದೆ ಜವಾಬ್ದಾರಿ ನಿರ್ವಹಿಸಲು ಇಷ್ಟ ಇಲ್ಲ. ಸಿಎಂ ನನ್ನ ಜೊತೆ ಮಾತಾಡಿಯೇ ನಿರ್ಧಾರ ತೆಗೆದುಕೊಂಡಿದ್ದಾರೆ. ಉಸ್ತುವಾರಿ ಕೈತಪ್ಪಿದ್ದಕ್ಕೆ ಯಾವುದೇ ರಾಜಕೀಯ ಇಲ್ಲ. ಏನೂ ಗೊತ್ತಿಲ್ಲದ ಜಿಲ್ಲೆಗೆ ಹೋಗಿ ಏನು ಪ್ರಯೋಜನ..? ಹೀಗಾಗಿ ಬೇರೆ ಜಿಲ್ಲೆಗೆ ಹೋಗಲು ನಿರಾಕರಿಸಿದ್ದೇನೆ. ತುಮಕೂರು ಉಸ್ತುವಾರಿ ಕೊಟ್ಟಿದ್ರೆ ಒಳ್ಳೇ ಕೆಲಸ ಮಾಡಬಹುದಿತ್ತು ಎಂದು ಸಚಿವ ಮಾಧುಸ್ವಾಮಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರಕ್ಕೆ ಸಿಎಂ ಸೇರಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ – ಯಾರಿಗೆ ಯಾವ ಜಿಲ್ಲೆ?

ಉಸ್ತುವಾರಿ ಹಂಚಿಕೆ ವಿಚಾರವಾಗಿ ಸಚಿವ ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾನೂ ಬೆಂಗಳೂರು ಉಸ್ತುವಾರಿ ಕೇಳಿದ್ದೆ ಅದು ಯಾರಿಗೂ ಕೊಟ್ಟಿಲ್ಲ. ಆದರೆ ಬೇರೆ ಯಾರಿಗೂ ಕೊಟ್ಟಿಲ್ಲ ಅಂದ್ರೆ ಅದು ಸಿಎಂ ಬಳಿ ಇರೋದೇ ಸೂಕ್ತ. ವರಿಷ್ಠರ ಸೂಚನೆ ಮೇರೆಗೆ ಸಿಎಂ ಈ ನಿರ್ಧಾರ ಮಾಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಪ್ರಯೋಗ ಮಾಡಲಾಗಿದೆ. ಅದರಂತೆ ನಮ್ಮಲ್ಲೂ ಮಾಡಿದ್ದಾರೆ. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ವರಿಷ್ಠರು, ಹೈಕಮಾಂಡ್ ತೀರ್ಮಾನ ಮಾಡಿ ಹಂಚಿಕೆ ಮಾಡಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಬೇರೆ ಬೇರೆ ಜಿಲ್ಲೆ ಹಂಚಿಕೆ ಮಾಡಲಾಗಿದೆ ಗೊತ್ತಿಲ್ಲ ಆದರೆ ತವರು ಜಿಲ್ಲೆ ಸಿಕ್ಕಿಲ್ಲ ಅಂದಮೇಲೆ ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿ ಇರೋದೇ ಸೂಕ್ತ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸೋಮಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

Comments

Leave a Reply

Your email address will not be published. Required fields are marked *