ಬಿಜೆಪಿಗೆ ವೋಟ್ ಹಾಕಿದ್ರೆ ನಿಮಗೆ ಕರ್ನಾಟಕದ ನೀರು – ಮಹಾರಾಷ್ಟ್ರದ ಜನತೆಗೆ ಬಿಎಸ್‍ವೈ ಮಾತು

ಬೆಂಗಳೂರು: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ಗಡಿ ಭಾಗಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬುಧವಾರ ಜತ್ ತಾಲೂಕಿನಲ್ಲಿ ಮಹಾರಾಷ್ಟ್ರಕ್ಕೆ ಕರ್ನಾಟಕದ ನೀರು ಹರಿಸುವುದಾಗಿ ಸಿಎಂ ಯಡಿಯೂರಪ್ಪ ಮಾತು ನೀಡಿರುವ ವಿಡಿಯೋ ಕ್ಲಿಪ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬಿಎಸ್‍ವೈ ಹೇಳಿದ್ದೇನು?
ಜತ್ ತಾಲೂಕಿನ ಹೆಚ್ಚು ಜನರು ಕನ್ನಡ ಭಾಷಿಕರು. ಕೃಷಿ ಮತ್ತು ಕುಡಿಯುವ ನೀರಿನ ಅಭಾವ ತೀವ್ರವಾಗಿರುವಂತದ್ದು. ಇವತ್ತು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ತಲುಪಿದೆ. ಈ ಗ್ರಾಮದಿಂದ 8-10 ಕಿಮೀ ದೂರದಲ್ಲಿ ಹರಿಯುತ್ತಿರುವ ಬೋರಾ ನದಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಹರಿಸುವುದರಿಂದ 30-40 ಗ್ರಾಮಗಳಿಗೆ 1 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಅನುಕೂಲ ಆಗುತ್ತೆ ಅನ್ನೋದನ್ನು ಕೇಳಿದ್ದೇವೆ.

ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಹಾರಾಷ್ಟ್ರ ಸಿಎಂ ಘಡ್ನವೀಸ್ ಜೊತೆಗೂ ಚರ್ಚೆ ಮಾಡುತ್ತೇನೆ. ಮಹಾರಾಷ್ಟ್ರ ಬೇರೆ, ಕರ್ನಾಟಕ ಬೇರೆಯಲ್ಲ. ನೀರಿಲ್ಲದಿದ್ದರೆ ಬದುಕಲು ಆಗಲ್ಲ. ರೈತರ ಹೊಲಕ್ಕೆ ನೀರು ಬೇಕು, ರೈತರ ಬೆಳೆದಂತಹ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ರೈತರ ಉತ್ಪನ್ನ 2 ಪಟ್ಟು ಹೆಚ್ಚಾಗಬೇಕು ಅಂತಾ ಪ್ರಧಾನಿ ಮೋದಿ ಅಪೇಕ್ಷೆ ಇದೆ. ಇದನ್ನು ಪೂರೈಸಲು ನಮ್ಮ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಿಮಗೆ ಯಾವ ರೀತಿ ಅನುಕೂಲ ಮಾಡಕ್ಕೆ ಸಾಧ್ಯ ಇದೆಯೋ, ಚರ್ಚೆ ಮಾಡಿ ಸಹಕಾರ ಕೊಡುತ್ತೇನೆ. ಯಡಿಯೂರಪ್ಪ ಬಂದಿದ್ದಕ್ಕೆ, ಇಲ್ಲಿ ಮಾತನಾಡಿದ್ದಕ್ಕೆ ಹಿಂದಿನ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಡಬೇಕು ಎಂದು ಮತದಾರರಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದಾರೆ.

ಇದೇ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ರಾಜ್ಯದಲ್ಲಿಯ ಜನರು ಭೀಕರ ಬರಗಾಲದಿಂದ ತತ್ತರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಹಾರಾಷ್ಟ್ರದ ಜನತೆಗೆ ನೀರು ಹರಿಸುವ ಮಾತುಗಳನ್ನಾಡುವುದು ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಕಳಸಾ-ಬಂಡೂರಿ ಯೋಜನೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *