ಸಿಎಂ ಆಡಿಯೋ ಲೀಕ್ ಪ್ರಕರಣಕ್ಕೆ ಟ್ವಿಸ್ಟ್ – ಕೊನೆಯ ಸಾಲಿನಲ್ಲಿ ಕುಳಿತ 5 ಮಂದಿ ಮೇಲೆ ಅನುಮಾನ

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಹುಬ್ಬಳ್ಳಿ ಬಿಜೆಪಿ ಸಭೆಯ ಆಡಿಯೋ ವಿಚಾರ ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಡಿಯೋವನ್ನು ಸುಪ್ರೀಂಕೋರ್ಟ್ ಸಾಕ್ಷ್ಯವಾಗಿ ಪರಿಗಣಿಸಿದೆ. ಆಡಿಯೋ ಲೀಕ್ ಸತ್ಯವನ್ನು ಬೆನ್ನಟ್ಟಿದ್ದ ಪಬ್ಲಿಕ್ ಟಿವಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ.

ನಗರದಲ್ಲಿ ನಡೆದ ಪಕ್ಷದ ಕೋರ್ ಕಮೀಟಿ ಸಭೆಯ ಆಡಿಯೋ ಬಹಿರಂಗವಾದ ನಂತರ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಯಾಗಿದೆ. ಆಡಿಯೋ ಬಿಡುಗಡೆಯಾದ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರುವ ಸಿಎಂ ಬಿಎಸ್‌ವೈ ಸಚಿವ ಶೆಟ್ಟರ್ ವಿರುದ್ಧ ಗರಂ ಆಗಿದ್ದಾರೆ. ಬಿಜೆಪಿ ಸಭೆಯ ಉಸ್ತುವಾರಿ ವಹಿಸಿಕೊಂಡಿದ್ದ ಶೆಟ್ಟರ್ ಶಿಷ್ಯರ ವಿರುದ್ಧ ಬಿಜೆಪಿ ನಾಯಕರು ಇದೀಗ ಕಿಡಿಕಿಡಿಯಾಗಿದ್ದಾರೆ.

ಹುಬ್ಬಳ್ಳಿ ಸಭೆಯ ಸಂಪೂರ್ಣ ಉಸ್ತುವಾರಿಯನ್ನ ಸಚಿವ ಜಗದೀಶ್ ಶೆಟ್ಟರ್ ತಮ್ಮ ಶಿಷ್ಯ, ಕಟೀಲ್ ಆಪ್ತ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಬಣಕ್ಕೆ ವಹಿಸಿದ್ದರು. ಆದರೆ ಟೆಂಗಿನಕಾಯಿ ಬಣ ಸರಿಯಾಗಿ ನಿರ್ವಹಿಸದಿರುವುದು ಸಿಎಂ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಬಿಎಸ್‌ವೈ ಆಡಿಯೋ ಸಾಕ್ಷ್ಯವಾಗಿ ಪರಿಗಣಿಸಿದ ಕೋರ್ಟ್

ಈ ವೀಡಿಯೋದಲ್ಲಿ ಕೇವಲ ಹಿಂಭಾಗದ ಚೇರ್ ಗಳು ಮಾತ್ರ ಕಾಣುತ್ತವೆ. ಸಿಎಂ ಧ್ವನಿ ಸ್ಪಷ್ಟವಾಗಿ ಕೇಳುತ್ತದೆ. ಇದನ್ನು ನೋಡಿದರೆ ಮುಂಭಾಗದಲ್ಲಿರುವ ನಾಯಕರು ವಿಡಿಯೋ ಮಾಡಿಲ್ಲ. ಕೊನೆಯ ಸಾಲಿನಲ್ಲಿ ಕುಳಿತವರು ಮಾಡಿರಬಹುದು ಅಥವಾ ನಿಂತಿದ್ದವರು ಲೀಕ್ ಮಾಡಿರಬಹುದು ಎಂಬ ಅನುಮಾನ ಮೂಡುತ್ತದೆ. ಹಾಗಾದರೆ ಈ ಸಭೆಯ ಕೊನೆಯ ಸಾಲಿನಲ್ಲಿ ಕುಳಿತವರು, ನಿಂತವರು ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗೆ ಉತ್ತರ ಸಭೆಯ ರಕ್ಷಣೆ ಹೊತ್ತಿದ್ದ ರಕ್ಷಣಾ ಸಿಬ್ಬಂದಿ. ಮಹೇಶ್ ಟೆಂಗಿನಕಾಯಿ ನೇಮಿಸಿದ್ದ ರಕ್ಷಣಾ ಸಿಬ್ಬಂದಿಯೇ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ಬಿಜೆಪಿ ನಾಯಕರನ್ನು ಬಲವಾಗಿ ಕಾಡುತ್ತಿದೆ.  ಇದನ್ನೂ ಓದಿ: ಬಿಎಸ್‌ವೈ ಆಡಿಯೋ ಸಂಚಲನ- ರಾಜ್ಯ ಬಿಜೆಪಿಗೆ ‘ಶಾ’ಕಿಂಗ್ ಸಂದೇಶ!

ಕೊನೆಯ ಸಾಲಿನಲ್ಲಿ ಕುಳಿತರ‍್ಯಾರು?
1. ಶಿವು ಮೆಣಸಿನಕಾಯಿ, ಪಾಲಿಕೆಯ ಮಾಜಿ ಸದಸ್ಯ
2. ಪ್ರವೀಣ್ ಪವಾರ್, ಬಿಜೆಪಿ ಕಾರ್ಯಕರ್ತ
3. ಪ್ರೀತಂ ಅರಕೇರಿ, ಬಿಜೆಪಿ ಕಾರ್ಯಕರ್ತ
4. ರವಿ ಕೊಪ್ಪಳ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ, ಹುಬ್ಬಳ್ಳಿ
5. ಪ್ರಶಾಂತ್ ಜಾಧವ್, ಬಿಜೆಪಿ ಕಾರ್ಯಕರ್ತ

ಸ್ಥಳೀಯ ಮುಖಂಡರಾಗಿರುವ ಮಹೇಶ್ ಟೆಂಗಿನಕಾಯಿ ಸಚಿವ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಲು ಈ ಅವಕಾಶ ಬಳಸಿಕೊಂಡರೆ ಎನ್ನುವ ವಿಚಾರಗಳು ಈಗ ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿದೆ.

Comments

Leave a Reply

Your email address will not be published. Required fields are marked *