ಕಲಾಪ ಶುರುವಾಗಿ 5 ಗಂಟೆಯ ನಂತರ ಸಿಎಂ ಹಾಜರ್

ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದು 5 ಗಂಟೆಯ ನಂತರ ಸಿಎಂ ಕಲಾಪದಲ್ಲಿ ಭಾಗಿಯಾಗಿದ್ದಾರೆ.

ಇಂದು ಸಂಜೆ 6 ಗಂಟೆಗೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಮುಗಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಈಗಾಗಲೇ ಸಮಯ ನಿಗದಿ ಮಾಡಿದ್ದಾರೆ. ಆದರೆ ಸಿಎಂ ಮಧ್ಯಾಹ್ನದವರೆಗೆ ವಿಧಾನಸೌಧಕ್ಕೆ ಬಂದಿರಲಿಲ್ಲ.

ಸ್ಪೀಕರ್ ರಮೇಶ್ ಕುಮಾರ್ ಅವರು ಭೋಜನ ವಿರಾಮ ನೀಡದೇ ಕಲಾಪ ನಡೆಸುತ್ತಿದ್ದರು. ಊಟಕ್ಕೆ ಹೋಗುಗುವರು ಹೋಗಿ. ಆದರೆ ಕಲಾಪ ಮಾತ್ರ ಯಾವುದೇ ಕಾರಣಕ್ಕೆ ಮುಂದೂಡುವುದಿಲ್ಲ ಎಂದು ಹೇಳಿದ್ದರು. ನಿರಂತರ ಚರ್ಚೆ ನಡೆಯುತ್ತಿದ್ದಾಗ ಮಧ್ಯಾಹ್ನ 3.15ರ ವೇಳೆಗೆ ಸಿಎಂ ವಿಧಾನಸೌಧಕ್ಕೆ ಆಗಮಿಸಿದರು.

ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಶುರುವಾದಾಗ ಸಿಎಂ ತಾಜ್ ವೆಸ್ಟೆಂಡ್ ಹೋಟೆಲಿಗೆ ಹೋಗಿದ್ದರು. ಹೀಗಾಗಿ ವೆಸ್ಟೆಂಡ್ ಹೋಟೆಲಿಗೆ ಸದನದಿಂದ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಸ್ವಲ್ಪ ಸಮಯದವರೆಗೂ ಮಾತನಾಡಿ ಅವರು ಸದನಕ್ಕೆ ಮರಳಿದರು. ನಂತರ ಎಂ.ಬಿ ಪಾಟೀಲ್ ಕೂಡ ಸಿಎಂ ಭೇಟಿ ಮಾಡಿ 15 ನಿಮಿಷದಲ್ಲಿ ವಿಧಾನಸೌಧಕ್ಕೆ ಮರಳಿದ್ದರು.

ಬೆಳಗ್ಗೆ 10 ಗಂಟೆಗೆ ಸದನ ಆರಂಭಗೊಂಡಾಗ ಬಿಜೆಪಿ ಶಾಸಕರು ಸದನಕ್ಕೆ ಆಗಮಿಸಿದ್ದರೆ, ದೋಸ್ತಿ ಪಕ್ಷದ ಕೇವಲ 4 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಇದನ್ನು ನೋಡಿ ಬಿಜೆಪಿ ಶಾಸಕರು ದೋಸ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಬಿಜೆಪಿಯ ಈಶ್ವರಪ್ಪ ಮಾತನಾಡಿ, ವಿಶ್ವಾಸಮತಯಾಚನೆಗೆ ಸಿಎಂ ಅವರೇ ಇನ್ನೂ ಬಂದಿಲ್ಲ ಎಂದ ಮೇಲೆ ಬೇರೆ ಶಾಸಕರು ಯಾಕೆ ಬರುತ್ತಾರೆ? ಯಥಾ ರಾಜ ತಥಾ ಪ್ರಜಾ ಎನ್ನುವ ಹಾಗಿದೆ ಪರಿಸ್ಥಿತಿ. ನಾನು ಉಳಿದ ವಿಚಾರದ ಬಗ್ಗೆ ಮಾತನಾಡಲ್ಲ. ಈ ಸದನದ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ತಾವು ಸೂಚನೆ ಕೊಟ್ಟ ಸಮಯಕ್ಕೆ ಶಾಸಕರು ಇಲ್ಲಿ ಬಂದು ಕೂರಬೇಕಿತ್ತು. ಅದನ್ನು ಬಿಟ್ಟು ಮಧ್ಯಾಹ್ನ 3, 4 ಗಂಟೆ ಹೊತ್ತಿಗೆ ನಾವೇನು ಮಾತನಾಡಿಲ್ಲ, ನಮಗೆ ಅವಕಾಶ ಕೊಡಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *