ಹವಾಮಾನ ವೈಪರೀತ್ಯ ಅಡಿಕೆ ಬೆಳೆಗಾರರು ಕಂಗಾಲು

-ಮಂಚದ ಮೇಲೆ ಅಡಿಕೆ, ಕೆಳಗೆ ಬೆಂಕಿ

ಚಿಕ್ಕಮಗಳೂರು: ವಾಯುಭಾರ ಕುಸಿತದ ಕಾರಣ ಹವಾಮಾನ ವೈಪರೀತ್ಯದಿಂದಾಗಿ ರೈತರು ಅಡಿಕೆಯನ್ನು ಒಣಗಿಸಲು ಆಗದೆ ಮಲೆನಾಡಿಗರು ಮಲಗುವ ಮಂಚದ ಮೇಲೆ ಅಡಿಕೆ ಹಾಕಿ, ಕೆಳಗೆ ಬೆಂಕಿ ಹಾಕಿ ಅಡಿಕೆಯನ್ನು ಒಣಗಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ವೃದ್ಧ ಗಜೇಂದ್ರ ಹೆಬ್ಬಾರ್ ಪ್ರಕೃತಿ ಎದುರು ಅಸಹಾಯಕರಾಗಿ ಮನೆಯಲ್ಲಿ ಮಲಗುವ ಮಂಚದ ಮೇಲೆ ಅಡಿಕೆ ಒಣಗಿಸುತ್ತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಲೆನಾಡಲ್ಲಿ ಕಳೆದ ಒಂದೆರಡು ತಿಂಗಳಿಂದಲೂ ಒಂದೆರಡು ದಿನ ಬಿಡುವು ನೀಡಿದ ವರುಣದೇವ ಮತ್ತೆ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಹೊತ್ತಲ್ಲದ ಹೊತ್ತಲ್ಲಿ ಮಳೆ, ಬಿಸಿಲು, ಮೋಡದ ವಾತಾವರಣ ನಿರ್ಮಾಣವಾಗುತ್ತಿದೆ. ಹಾಗಾಗಿ, ಮಲೆನಾಡಿಗರು ಕೊಯ್ದಿರುವ ಕಾಫಿಯನ್ನು ಒಣಗಿಸಲು ಜಾಗವಿಲ್ಲದೆ ಪರದಾಡುವಂತಾಗಿದೆ. ಅಡಿಕೆ-ಕಾಫಿ ಮಲೆನಾಡಿಗರ ಜೀವ. ಸಣ್ಣ-ಸಣ್ಣ ಹಿಡುವಳಿ ಮೂಲಕ ಬದುಕು ಕಟ್ಟಿಕೊಂಡಿವರುವವರೆ ಹೆಚ್ಚು. ಆದರೆ, ಈಗ ಹವಾಮಾನದ ವೈಪರೀತ್ಯದಿಂದ ಮಲೆನಾಡಿಗರು ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಇದನ್ನೂ ಓದಿ: ಅಮೆರಿಕಗೆ ತೆರಳಿದ ಅಪ್ಪು ಮಗಳು ಧೃತಿ

ಪ್ರಕೃತಿ ವಿರುದ್ಧ ಹೋರಾಡಲು ಶಕ್ತಿ ಇಲ್ಲದ ಮನುಷ್ಯರು ಸಿಕ್ಕ-ಸಿಕ್ಕ ದಾರಿಯಲ್ಲಿ ಬೆಳೆಗಳನ್ನು ಉಳಿಸಿಕೊಂಡು ವರ್ಷದ ಬದುಕು ದೂಡಲು ಮುಂದಾಗಿದ್ದಾರೆ. ಈಗಾಗಲೇ ಮಲೆನಾಡಿನಾದ್ಯಂತ ವರುಣ ಅಬ್ಬರಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿದೆ. ಮಲೆನಾಡಲ್ಲಿ ಜನವರಿಯಿಂದಲೂ ನಿರಂತರ ಮಳೆಯಾಗಿದೆ. ಬೆಳೆ ಗಿಡದಲ್ಲಿ ಇರುವುದಕ್ಕಿಂತ ಮಣ್ಣು ಪಾಲಾಗಿದ್ದೆ ಹೆಚ್ಚು. ಮಳೆ ವಿರುದ್ಧ ತೊಡೆತಟ್ಟಿ ನಿಂತು ಬದುಕುಳಿದಿದ್ದ ಬೆಳೆಗೆ ಈಗ ಸೂರ್ಯದೇವನೂ ಮಗ್ಗಲ ಮುಳ್ಳಾಗಿದ್ದಾನೆ. ವಾಯಭಾರ ಕುಸಿತದಿಂದ ಮಲೆನಾಡಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಜನ ಬಿಸಿಲು ನೋಡದೆ ವಾರವೇ ಕಳೆದಿದೆ. ಬರೀ ಮೋಡ. ತಣ್ಣನೆಯ ಗಾಳಿ. ಇದರಿಂದ ಸಣ್ಣ-ಸಣ್ಣ ಕಾಫಿ ಹಾಗೂ ಅಡಿಕೆ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಹೈರಾಣಾಗಿದ್ದಾರೆ. ಬೇರೆ ದಾರಿ ಇಲ್ಲದೆ ಶತಮಾನಗಳಲ್ಲೇ ಮಾಡದ ಹೋರಾಟದ ಮೂಲಕ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಉಗ್ರರ ದಾಳಿ – ಕರ್ನಲ್‌, ಪತ್ನಿ, ಮಗ ಸೇರಿ 7 ಮಂದಿ ಬಲಿ

ಕಳೆದ ಒಂದೆರಡು ತಿಂಗಳ ನಿರಂತರ ಮಳೆಯಿಂದ ಮಲೆನಾಡಿಗರು ಸುರಿಯೋ ಮಳೆಯಲ್ಲಿ ಕಾಫಿಯನ್ನು ಕಟಾವು ಮಾಡಿದ್ದರು. ನೆಲದಲ್ಲಿ ಬಿದ್ದ ಕಾಫಿ-ಅಡಿಕೆಯನ್ನು ಆಯ್ದು ಮನೆಗೆ ತಂದಿದ್ದರು. ಆದರೆ ಇದೀಗ ಆ ಕಾಫಿ-ಅಡಿಕೆಯನ್ನು ಒಣಗಿಸಲು ಜಾಗವಿಲ್ಲದೆ ಬೆಂಕಿ ಹಾಕಿ ಒಣಗಿಸುತ್ತಿದ್ದಾರೆ. ಈ ರೀತಿ ಒಣಗಿಸದಿದ್ದರೆ ಬೆಳೆ ಮೇಲೆ ಹೂ ಬೆಳೆದು ಬೆಳೆ ಸಂಪೂರ್ಣ ನಾಶವಾಗಲಿದೆ. ಕಳೆದ ಎರಡ್ಮೂರು ವರ್ಷಗಳಿಂದ ಬಹುತೇಕ ಬೆಳೆಯನ್ನು ಕಳೆದುಕೊಂಡಿದ್ದ ಮಲೆನಾಡಿಗರು ಈ ವರ್ಷ ಮಳೆ ಪ್ರಮಾಣ ತುಸು ಕಡಿಮೆ ಇದ್ದರೂ ಬೆಳೆಯನ್ನು ಕಳೆದುಕೊಂಡು ಬದುಕಿನ ಬಗ್ಗೆ ಅತಂತ್ರರಾಗಿದ್ದಾರೆ. ಕಟಾವು ಮಾಡಿದ ಬೆಳೆ ಇಟ್ಟ ಜಾಗದಲ್ಲೇ ಕೊಳೆಯುತ್ತದೆ. ಈ ಬಾರಿ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ಬದುಕು ಅತಂತ್ರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ-ಅಡಿಕೆ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಬೆಳೆಗಾರರು ಮತ್ತಷ್ಟು ಶೋಚನಿಯ ಸ್ಥಿತಿ ತಲುಪಲಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯವರ 4 ಗಂಟೆ ಭೇಟಿಗೆ 23 ಕೋಟಿ ಖರ್ಚು- ಮಧ್ಯಪ್ರದೇಶ ಸರ್ಕಾರ

Comments

Leave a Reply

Your email address will not be published. Required fields are marked *