ಮುಸ್ಲಿಮರು ಗೋಮಾಂಸ ತಿನ್ನಬಾರದು: ಇಸ್ಲಾಂ ಧರ್ಮಗುರು ಮೌಲಾನಾ ಶಹಾಬುದ್ದೀನ್‌ ಕರೆ

ಲಕ್ನೋ: ಮುಸ್ಲಿಮರು (Muslims) ಗೋಮಾಂಸ ಸೇವನೆಯನ್ನು ನಿಲ್ಲಿಸಬೇಕು ಎಂದು ಇಸ್ಲಾಮಿಕ್‌ ಧರ್ಮಗುರು ಮೌಲಾನಾ ಶಹಾಬುದ್ದೀನ್‌ ರಿಜ್ವಿ ಬರೇಲ್ವಿ (Maulana Shahabuddin Rizvi Barelvi) ಕರೆ ನೀಡಿದ್ದಾರೆ.

ಅಸ್ಸಾಂನಲ್ಲಿ (Assam) ಹೋಟೆಲ್‌ ಮತ್ತು ಕಾರ್ಯಕ್ರಮದ ಸ್ಥಳಗಳಲ್ಲಿ ಗೋಮಾಂಸ ನಿಷೇಧಿಸಿ ಅಸ್ಸಾಂ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ, ಮುಸ್ಲಿಂ ಧರ್ಮಗುರು, ಅಸ್ಸಾಂ ರಾಜ್ಯದ ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ!

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಂ ವಿರೋಧಿ ಮನಸ್ಥಿತಿ ಹೊಂದಿದ್ದಾರೆ. ಯಾವಾಗಲೂ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ಅವರ ಚಿಂತನೆಯು ಮುಸ್ಲಿಂ ವಿರೋಧಿಯಾಗಿದೆ ಎಂದು ಟೀಕಿಸಿದ್ದಾರೆ.

ಗೋಮಾಂಸ ನಿಷೇಧವು ಮುಸ್ಲಿಂ ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಸ್ಲಾಂ ಗೋಮಾಂಸ ಸೇವನೆಯನ್ನು ಕಡ್ಡಾಯ ಮಾಡುವುದಿಲ್ಲ. ಜನರು ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ ಎಂದು ಧರ್ಮಗುರು ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಮರು ಗೋಮಾಂಸವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ನಂಬಿರುವಂತಿದೆ. ಅಸ್ಸಾಂನಲ್ಲಿರುವ ಮುಸ್ಲಿಮರು ಗೋಮಾಂಸ ತಿನ್ನದೆ ಬದುಕುವಂತೆ ನಾನು ಕರೆ ನೀಡುತ್ತೇನೆ. ಜೀವನ ಮತ್ತು ಸಾವು ದೇವರ ಕೈಯಲ್ಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನದಿಂದ ಬೆಂಗಳೂರು ನೀರಿನ ಬವಣೆಗೆ ಮುಕ್ತಿ: ಹೆಚ್‌.ಡಿ ದೇವೇಗೌಡ

ಅಸ್ಸಾಂ ಸಿಎಂ ಶರ್ಮಾ ಅವರು ರಾಜ್ಯದ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸವನ್ನು ಬಡಿಸುವುದು ಮತ್ತು ಸೇವಿಸುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಗೋಮಾಂಸ ಸೇವನೆಗೆ ಸಂಬಂಧಿಸಿದಂತೆ ಈಗಿರುವ ಕಾನೂನಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಅಳವಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.