ಭಾರವಾದ ಬ್ಯಾಗ್ ಹೊತ್ತು ಶಾಲಾ ಆವರಣದಲ್ಲೇ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು!

ವಾರಂಗಲ್: ಒಂಭತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಆವರಣದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಕರಿಮಾಬಾದ್‍ನಲ್ಲಿ ನಡೆದಿದೆ.

ಈ ಘಟನೆ ಸೋಮವಾರ ನಡೆದಿದ್ದು, ಮೃತ ವಿದ್ಯಾರ್ಥಿನಿಯನ್ನು 14 ವರ್ಷದ ಪಿ. ಶ್ರೀವರ್ಷಿತ ಎಂದು ಗುರುತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಶಾಲಾ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿನಿ ಬೆಳಿಗ್ಗೆ 8.45 ಸುಮಾರಿಗೆ ಕೌಟಿಲ್ಯ ಹೈಸ್ಕೂಲ್ ಗೆ ಬಂದಿದ್ದಾಳೆ. ಭಾರವಾದ ಬ್ಯಾಗ್ ಹೊತ್ತ ಆಕೆ ಶಾಲೆಯ ಮೆಟ್ಟಿಲುಗಳನ್ನು ಹತ್ತುತ್ತಾ 3ನೇ ಮಹಡಿವರೆಗೆ ಬಂದು ಕುಸಿದುಬಿದ್ದಾಳೆ. ಕೂಡಲೇ ಅಲ್ಲೇ ಅದ್ದ ಇತರ ವಿದ್ಯಾರ್ಥಿಗಳು ಶಾಲಾ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಘಟನೆಯಿಂದ ವಿದ್ಯಾರ್ಥಿನಿಯ ಹಣೆಗೆ ತೀವ್ರ ಏಟು ಬಿದ್ದಿದ್ದು, ಮೂಗಿನಲ್ಲಿ ರಕ್ತ ಬರಲಾರಂಭಿಸಿತ್ತು. ಕೂಡಲೇ ಶಾಲಾ ಸಿಬ್ಬಂದಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ನಂತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಅಸ್ವಸ್ಥ ವಿದ್ಯಾರ್ಥಿನಿಯ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ವಿದ್ಯಾರ್ಥಿನಿಯನ್ನು ಪರೀಕ್ಷಿಸಿ ಆಕೆಗೆ ಬಿಪಿ ಕಡಿಮೆಯಾಗಿದೆ. ಹೀಗಾಗಿ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅಂತೆಯೇ ಆಕೆಯನ್ನು ನಗರದ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯದಲ್ಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಶಾಲಾ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ತಡವಾಗಿ ಕರೆದುಕೊಂಡು ಹೋಗಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಅಂತ ಪೋಷಕರು ಆರೋಪ ಮಾಡುತ್ತಿದ್ದಾರೆ. ವಿದ್ಯಾರ್ಥಿ ಸಂಘಟನೆಗಳು ಹಾಗೂ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆಯನ್ನೂ ಮಾಡಿದ್ದಾರೆ.

ವಿದ್ಯಾರ್ಥಿನಿ ನಿರ್ಜಲೀಕರಣದಿಂದ ಬಳಲುತ್ತಿದ್ದರಿಂದ ಮೃತಪಟ್ಟಿದ್ದಾಳೆ ಅಂತ ವೈದ್ಯರು ಹೇಳಿದ್ದಾಗಿ ಶಾಲೆಯ ಪ್ರಾಂಶುಪಾಲರಾದ ಕೆ. ಶ್ರೀಧರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *