iPhone 17 ಖರೀದಿಗೆ ನೂಕುನುಗ್ಗಲು – ಆ್ಯಪಲ್‌ ಸ್ಟೋರ್‌ ಮುಂದೆ ಹೊಡೆದಾಡಿಕೊಂಡ ಗ್ರಾಹಕರು

ಮುಂಬೈ: ಆ್ಯಪಲ್‌ ಸ್ಟೋರ್‌ನಲ್ಲಿ ಹೊಸ ಐಫೋನ್‌ 17 ಖರೀದಿಗೆ ಉತ್ಸಾಹ ಜೋರಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸ್ಟೋರ್‌ನಲ್ಲಿ ಐಫೋನ್‌ ಖರೀದಿಗೆ ಗ್ರಾಹಕರು ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

ಆ್ಯಪಲ್ ಅಂಗಡಿಯ ಹೊರಗೆ ನೂರಾರು ಗ್ರಾಹಕರು ಜಮಾಯಿಸಿದ್ದಾರೆ. ನೂಕುನುಗ್ಗಲು ಹೆಚ್ಚಾಗಿ ಪರಸ್ಪರರು ಜಗಳ ಮಾಡಿಕೊಂಡಿದ್ದಾರೆ. ಐಫೋನ್‌ಗೆ ನಾ ಮುಂದು ತಾ ಮುಂದು ಅಂತ ಎಲ್ಲರೂ ಪೈಪೋಟಿ ನಡೆಸಿದ್ದಾರೆ.

ಗಲಾಟೆ ವೇಳೆ ಕೆಂಪು ಶರ್ಟ್‌ ಧರಿಸಿರುವ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಯೊಬ್ಬರು ಹೊರಗಡೆ ಎಳೆದೊಯ್ಯುತ್ತಿರುವ ವೀಡಿಯೋ ಕೂಡ ವೈರಲ್‌ ಆಗಿದೆ. ಒಬ್ಬರ ಮೇಲೆ ಒಬ್ಬರು ಮುಗಿಬಿದ್ದು ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆಗಳು ಸ್ಥಳದಲ್ಲಿ ನಡೆದಿವೆ. ನೂಕುನುಗ್ಗಲಲ್ಲಿ ಕೆಲವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ಮಾಡುವವರನ್ನು ಹೊರಗೆ ಎಳೆದು ಕಳುಹಿಸಿದ್ದಾರೆ.

ಆ್ಯಪಲ್ ತನ್ನ ಹೊಸದಾಗಿ ಬಿಡುಗಡೆಯಾದ ಐಫೋನ್ 17 ಮಾರಾಟವನ್ನು ಭಾರತದಾದ್ಯಂತ ಪ್ರಾರಂಭಿಸಿದೆ. ಮುಂಬೈ ಮತ್ತು ದೆಹಲಿಯ ಪ್ರಮುಖ ಅಂಗಡಿಗಳ ಹೊರಗೆ ಜನಸಂದಣಿ ಹೆಚ್ಚಳಕ್ಕೆ ಕಾರಣವಾಗಿದೆ.

ಆ್ಯಪಲ್ ಕಂಪನಿಯು ಐಫೋನ್ 17 ಮತ್ತು ಹೊಚ್ಚ ಹೊಸ ಐಫೋನ್ ಏರ್ ಜೊತೆಗೆ ಟಾಪ್ ಮಾಡೆಲ್‌ಗಳಾದ ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಇವುಗಳ ಬೆಲೆ 82,900 ರೂ.ನಿಂದ 2.3 ಲಕ್ಷ ರೂ. ವರೆಗೆ ಇದೆ.