ರಾಮನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸ್ವಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ನಗರದ ನಗರಸಭೆಯ ಅಧ್ಯಕ್ಷರಾಗಿದ್ದ ಟಿ.ರವಿಕುಮಾರ್ ಸ್ವಪಕ್ಷೀಯರಿಂದಲೇ ಅವಿಶ್ವಾಸಕ್ಕೆ ತುತ್ತಾಗಿ ಪದಚ್ಯುತಗೊಂಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ರತ್ನಮ್ಮ ಪಾಪಣ್ಣ ಜಯಭೇರಿ ಬಾರಿಸಿದ್ದಾರೆ.
ರಾಜ್ಯದಲ್ಲಿ ದೋಸ್ತಿಗಳಾಗಿರುವ ಕಾಂಗ್ರೆಸ್ ಜೆಡಿಎಸ್ ನಡುವೆ ಚುನಾವಣಾ ಸಮರ ಏರ್ಪಟ್ಟಿತು. ಆಂತರಿಕ ಒಪ್ಪಂದದಂತೆ ಬಿಜೆಪಿಯಿಂದ ಚುನಾಯಿತರಾಗಿದ್ದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರತ್ನಮ್ಮ ಕಣಕ್ಕಿಳಿದಿದ್ದರು. ಜೆಡಿಎಸ್ ಅಭ್ಯರ್ಥಿ ಸುಜಾತ ಕೂಡ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಅನಿವಾರ್ಯವಾಗಿ ನಡೆದ ಚುನಾವಣೆಯಲ್ಲಿ 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ 19, ಜೆಡಿಎಸ್ ಅಭ್ಯರ್ಥಿ 11 ಮತಗಳಿಸಿ ಬಿಜೆಪಿಯ ಅಭ್ಯರ್ಥಿ ರತ್ನಮ್ಮ ಪಾಪಣ್ಣ ನೂತನ ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಪದಚ್ಯುತ ಅಧ್ಯಕ್ಷ ಪಿ ರವಿಕುಮಾರ್ ಗೈರುಹಾಜರಾಗಿದ್ದರು. ಕೊನೆಗೆ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ರತ್ನಮ್ಮ ಪಾಪಣ್ಣ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಮಾರುತಿ ಪ್ರಸನ್ನ ಘೋಷಿಸಿದರು.
ರಾಮನಗರ ನಗರಸಭೆಯಲ್ಲಿ 31 ಸದಸ್ಯ ಬಲವಿದೆ. ಕಾಂಗ್ರೆಸ್ನ 15, ಜೆಡಿಎಸ್ನ 12, ಬಿಜೆಪಿ 2, 2 ಪಕ್ಷೇತರ ಸದಸ್ಯರಿದ್ದಾರೆ. ಈ ನಡುವೆ ಕಾಂಗ್ರೆಸ್ನ 15 ಸದಸ್ಯರ ಪೈಕಿ ವಾರ್ಡ್ ನಂ 2ರ ಸದಸ್ಯ ಡಿ.ಕೆ.ಶಿವಕುಮಾರ್ ಹಾಗೂ ಪಕ್ಷೇತರ ಸದಸ್ಯ ಎಂ.ಜಿ. ಫೈರೋಜ್ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ 5ನೇ ವಾರ್ಡ್ ಸದಸ್ಯೆ ರತ್ನಮ್ಮ ಒಳ ಒಪ್ಪಂದದಂತೆ ಕಾಂಗ್ರೆಸ್ ಸೇರಿದ್ದು ಈಗ ಅಧ್ಯಕ್ಷೆಯಾಗಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ವಕ್ಷೇತ್ರ ರಾಮನಗರದಲ್ಲೇ ಮುಖಭಂಗವಾದಂತಾಯಿತು. ರತ್ನಮ್ಮ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply