ದೆಹಲಿಯಲ್ಲಿ ಮತ್ತಷ್ಟು ಹಿಂಸಾಚಾರ – ಪೊಲೀಸರನ್ನೇ ಹೊಡೆದ ಪ್ರತಿಭಟನಾಕಾರರು

– ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಮನವಿ
– ಪಾಕಿಗಳಿಗೂ ಪೌರತ್ವ ಕೇಳಿ ಅಂತ ಮೋದಿ ಸವಾಲು

ನವದೆಹಲಿ: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸ್ತಿದ್ದ ದೆಹಲಿಯ ಜಾಮಿಯಾ ವಿವಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ನಡೆಸುತ್ತಿರೋ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಇವತ್ತು ಈಶಾನ್ಯ ದೆಹಲಿಯ ಸೀಲಂಪುರ ಹೊತ್ತಿ ಉರಿದಿದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಪ್ರತಿಭಟನಾಕಾರರು ಕಲ್ಲು ತೂರಿದ್ರೆ ಪೊಲೀಸ್ರು ಆಶ್ರುವಾಯು ಪ್ರಯೋಗಿಸಿ, ಲಾಠಿ ಬೀಸಿದ್ದಾರೆ. ಈ ವೇಳೆ, ಪ್ರತಿಭಟನಾಕಾರರು ಪೊಲೀಸರನ್ನೇ ಅಟ್ಟಾಡಿಸಿ ಹೊಡೆದಿದ್ದಾರೆ. ಘಟನೆಯಲ್ಲಿ ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದಾರೆ.

ಕಿಡಿಗೇಡಿಗಳು ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲಿನಿಂದ ಅಟ್ಯಾಕ್ ಮಾಡುತ್ತಿದ್ದಾರೆ. ಕಲ್ಲು ತೂರಾಟದ ವೇಳೆ ಮೂರು ದೆಹಲಿ ಸಾರಿಗೆ ಬಸ್‍ಗಳು ಜಖಂಗೊಂಡಿವೆ. ಹತ್ತಾರು ವಾಹನಗಳು ಸುಟ್ಟು ಕರಕಲಾಗಿವೆ. ಸೀಲಂಪುರ್, ಗೋಕುಲ್‍ಪುರಿ ಸೇರಿ 7 ಮೆಟ್ರೋ ಸ್ಟೇಷನ್ ಬಂದ್ ಮಾಡಲಾಗಿದೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಅಲ್ಲಲ್ಲಿ ಹಿಂಸಾಚಾರ ಕೂಡ ನಡೆಯುತ್ತಿದೆ. ಅಸ್ಸಾಂನಲ್ಲಿ 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಈ ನಡುವೆ, ಜಾಮಿಯಾ ಪ್ರತಿಭಟನೆ ವೇಳೆ, ದೆಹಲಿ ಪೊಲೀಸರು ಒಂದೇ ಒಂದು ಬುಲೆಟ್ ಹಾರಿಸಿಲ್ಲ. ಘರ್ಷಣೆಗೆ ಸಂಬಂಧಿಸಿ 11 ಮಂದಿಯನ್ನು ಬಂಧಿಸಿದ್ದು, ಇವರಲ್ಲಿ ವಿದ್ಯಾರ್ಥಿಗಳ್ಯಾರು ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪೌರತ್ವ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತವರ ಮಿತ್ರಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಬೇಕಂತಲೇ ದೇಶದ ಮುಸ್ಲಿಮರಲ್ಲಿ ಅಭದ್ರತೆ ಭಾವ ಮೂಡಿಸ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಪಾಕಿಸ್ತಾನಿಯರಿಗೆ ಪೌರತ್ವ ನೀಡಬೇಕೇ ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನೆ ಮಾಡಿದ್ದಾರೆ. ನಿಮಗೆ ತಾಕತ್ ಇದ್ರೆ ಪಾಕಿಸ್ತಾನದವರಿಗೆ ಪೌರತ್ವ ಕೊಡ್ತೀವಿ ಅಂತಾ ಕಾಂಗ್ರೆಸ್ ಬಹಿರಂಗವಾಗಿ ಹೇಳಲಿ ಎಂದು ಮೋದಿ ಸವಾಲು ಹಾಕಿದ್ದಾರೆ.

ನೀವೆಷ್ಟೇ ಬೊಬ್ಬೆ ಹಾಕಿದ್ರೂ ಪೌರತ್ವ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅಮಿತ್ ಷಾ ಕಡ್ಡಿ ತುಂಡು ಮಾಡಿದಂತೆ ಹೇಳಿಕೆ ನೀಡಿದ್ದಾರೆ. ಆದ್ರೆ, ಪೌರತ್ವದ ಕಾಯ್ದೆ ಮತ್ತು ಖಾಕಿ ದೌರ್ಜನ್ಯ ಖಂಡಿಸಿ ರಾಷ್ಟ್ರಪತಿಗಳ ಮಧ್ಯಪ್ರವೇಶ ಕೋರಿ ವಿಪಕ್ಷಗಳ ನಿಯೋಗ ಮನವಿ ಸಲ್ಲಿಸಿದೆ. ಈ ವೇಳೆ ರಾಷ್ಟ್ರಪತಿ ಕೋವಿಂದ್ ಕೂಡ ಖಾಕಿ ದೌರ್ಜನ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ರು ಎನ್ನಲಾಗಿದೆ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಜಾಮಿಯಾ ವಿವಿ ಘರ್ಷಣೆ ಪ್ರಕರಣವನ್ನು ಜಲಿಯನ್‍ವಾಲಾ ಬಾಗ್ ದುರಂತಕ್ಕೆ ಹೋಲಿಸಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಐಸಿಯುನಲ್ಲಿದೆ ಎಂದು ನಟ ಕಮಲ್‍ಹಾಸನ್ ಟೀಕಿಸಿದ್ದಾರೆ. ನಿರ್ದೇಶಕರಾದ ಅನುರಾಗ್ ಠಾಕೂರ್, ಕೊಂಕಣ್ ಸೇನ್ ಶರ್ಮಾ, ನಟಿ ತಾಪ್ಸಿ ಪನ್ನು, ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಆಕಾಶ್ ಚೋಪ್ರಾ ಸೇರಿ ಹಲವರು ಪೊಲೀಸ್ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಪೌರತ್ವ ಕಾಯ್ದೆ ಖಂಡಿಸಿ ಬೀದಿಗಿಳಿದಿದ್ದ ವಿದ್ಯಾರ್ಥಿಗಳ ಮೇಲಿನ ಖಾಕಿ ದೌರ್ಜನ್ಯ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ಇಂದು ವಿಚಾರಣೆ ನಡೆಯಿತು. ಪ್ರತಿಭಟನೆ, ಹಿಂಸಾಚಾರ ನಡೆದ ಪ್ರದೇಶಗಳ ವ್ಯಾಪ್ತಿಗೆ ಬರುವ ಹೈಕೋರ್ಟ್‍ಗಳಲ್ಲಿ ಅರ್ಜಿ ಸಲ್ಲಿಸಿ ಎಂದು ಸಿಜೆಐ ಬೊಬ್ಡೆ ನೇತೃತ್ವದ ಪೀಠ ಆದೇಶ ನೀಡಿದೆ.

ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸುವ ಅಧಿಕಾರ, ಸ್ವಾತಂತ್ರ್ಯ ಹೈಕೋರ್ಟ್‍ಗಳಿಗೆ ಇದೆ. ಅಲ್ಲದೇ, ತಪ್ಪು ಮಾಡಿದವರನ್ನ ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ. ಇದು ಶಾಂತಿ ಭದ್ರತೆಗೆ ಸಂಬಂಧಿಸಿದ ವಿಚಾರ. ಹೀಗಾಗಿ ಇದ್ರಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದ್ರೆ ಅರೆಸ್ಟ್‍ಗೆ ಮೊದಲು ಪ್ರತಿಭಟನಾಕಾರರಿಗೆ ಏಕೆ ನೊಟೀಸ್ ಜಾರಿ ಮಾಡಿಲ್ಲ ಎಂದು ಕೇಂದ್ರವನ್ನು ಕೋರ್ಟ್ ಪ್ರಶ್ನೆ ಮಾಡಿದೆ. ಜೊತೆಗೆ ಮೊದಲು ಹೈಕೋರ್ಟ್ ಮೊರೆ ಏಕೆ ಹೋಗಲಿಲ್ಲ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.

ಕೇಂದ್ರದ ಪರ ಸಾಲಿಸಿಟರ್ ಜನೆರಲ್ ತುಷಾರ್ ಮೆಹ್ತಾ, ಅರ್ಜಿದಾರರ ಪರ ಇಂದಿರಾ ಜೈಸಿಂಗ್ ವಾದ ಮಂಡಿಸಿದ್ರು. ಪೊಲೀಸರು ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿಯೇ ಇಲ್ಲ.. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಸತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ ಎಂದು ತುಷಾರ್ ಮೆಹ್ತಾ ವಾದ ಮಂಡಿಸಿದ್ರು. ಸುಳ್ಳೇಕೆ ಹೇಳ್ತೀರಾ ಎಂದು ಇಂದಿರಾ ಜೈಸಿಂಗ್, ಮೆಹ್ತಾರನ್ನು ಪ್ರಶ್ನಿಸಿದ್ರು.

ಸೋಮವಾರ ಬೀದಿಗಿಳಿದು ಪೌರತ್ವ ಕಾಯ್ದೆ ಖಂಡಿಸಿದ್ದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೊಲ್ಕೋತ್ತಾ ಹೈಕೋರ್ಟ್‍ನಲ್ಲಿ ಮೂರು ದೂರು ದಾಖಲಾಗಿವೆ.

Comments

Leave a Reply

Your email address will not be published. Required fields are marked *