ಸಿನಿಮಾ ಜಗತ್ತಿನ ಪಾಲಿಗೆ ನೆಚ್ಚಿನ ಸ್ಥಳವಾಗಿದ್ದ ಪ್ರೀಮಿಯರ್ ಸ್ಟುಡಿಯೋ ಇನ್ನು ನೆನಪು ಮಾತ್ರ

ಮೈಸೂರು: ಸಿನಿಮಾ ಜಗತ್ತಿನ ಪಾಲಿಗೆ ನೆಚ್ಚಿನ ಸ್ಥಳವಾಗಿದ್ದ ಮೈಸೂರಿನ ಹೆಮ್ಮೆಯ ಪ್ರೀಮಿಯರ್ ಸ್ಟುಡಿಯೋ ಇನ್ನೂ ನೆನಪು ಮಾತ್ರವಾಗಿದ್ದು, ಈಗ ಸ್ಟೂಡಿಯೋ ನೆಲಸಮವಾಗಿದೆ.

ಕನ್ನಡ, ತಮಿಳು, ಹಿಂದಿ, ತೆಲುಗು ಹಾಗೂ ಹಲವು ಭಾಷೆ ಸೇರಿದಂತೆ ಇಟಲಿ, ಇಂಗ್ಲಿಷ್ ಭಾಷೆಗಳ ಸಿನಿಮಾ ಚಿತ್ರೀಕರಣಕ್ಕೆ ಮೈಸೂರಿನ ಪ್ರೀಮೀಯರ್ ಸ್ಟುಡಿಯೋ ಸಾಕ್ಷಿಯಾಗಿತ್ತು. ದಕ್ಷಿಣ ಭಾರತದ ಸಿನಿಮಾ ಚಿತ್ರೀಕರಣಕ್ಕೆ ಈ ಸ್ಟುಡಿಯೋ ಹೆಸರು ವಾಸಿವಾಗಿದ್ದು, ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಈ ಮೂಲಕ ಪ್ರೀಮಿಯರ್ ಸ್ಟುಡಿಯೋ ಸಾವಿರಾರು ಜನರಿಗೆ ಬದುಕು ಕೊಟ್ಟಿತ್ತು.

ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್, ರಜನೀಕಾಂತ್, ಅಮಿತಾಬ್ ಬಚ್ಚನ್, ಎಂ.ಜಿ. ರಾಮಚಂದ್ರನ್, ಕಮಲಹಾಸನ್, ಜಯಲಲಿತಾ ಸೇರಿ ಘಟಾನುಘಟಿ ನಟ – ನಟಿಯರ ಸಿನಿಮಾಗಳು ಇಲ್ಲಿ ಶೂಟಿಂಗ್ ಆಗಿವೆ. ಇಂತಹ ಪ್ರೀಮಿಯರ್ ಸ್ಟುಡಿಯೋದಲ್ಲಿ 1988 ರಲ್ಲಿ ದೊಡ್ಡ ಅಗ್ನಿ ಅವಘಡ ಸಂಭವಿಸಿ ಇಡೀ ಸ್ಟುಡಿಯೋ ಸುಟ್ಟು ಹೋಗಿತ್ತು. ಅಷ್ಟೇ ಅಲ್ಲದೇ 61 ಜನ ಜೀವಂತ ದಹನವಾಗಿದ್ದರು. ಆ ನಂತರ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣಗಳು ಕಡಿಮೆಯಾಗಿ ಬಿಟ್ಟಿದ್ದವು ಎಂದು ಕಾರ್ಮಿಕರಾದ ಅನೀಷ್ ಮತ್ತು ಜಾಕೀರ್ ಹೇಳಿದ್ದಾರೆ.

ಪ್ರೀಮಿಯರ್ ಸ್ಟುಡಿಯೋವನ್ನು ಈಗ ಮಾಲೀಕರು ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ. ಈ ಜಾಗದಲ್ಲಿ ಅಪಾರ್ಟ್ ಮೆಂಟ್ ಕಟ್ಟಲಾಗುತ್ತದೆ. ಸಿನಿಮಾಗಳ ಶೂಟಿಂಗ್ ಕುಂಠಿತಗೊಂಡಿದಕ್ಕೆ ಈ ಸ್ಟುಡಿಯೋ ನಷ್ಟಕ್ಕೆ ಒಳಗಾಗಿತ್ತು. ಆದ್ದರಿಂದ ಈ ನಿರ್ಧಾರಕ್ಕೆ ಬಂದೆವು ಎಂದು ಸ್ಟುಡಿಯೋ ಮಾಲೀಕರು ಹೇಳಿದ್ದಾರೆ.

ಪ್ರೀಮೀಯರ್ ಸ್ಟುಡಿಯೋ ಕನ್ನಡ ಚಿತ್ರರಂಗದ ಜೊತೆಗೆ ದಕ್ಷಿಣ ಭಾರತದ ಬಹುತೇಕ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿದೆ. ಇಂತಹ ಸ್ಟುಡಿಯೋ ಇದೆ ಎಂಬ ಹೆಮ್ಮೆ ಮೈಸೂರಿಗೆ ಇತ್ತು. ಇನ್ನೂ ಅದು ನೆನಪು ಮಾತ್ರ ಅನ್ನೋದು ಸಿನಿಮಾಸಕ್ತರಿಗೆ ಬೇಸರ ಮೂಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *