ಹೆಚ್ಚುವರಿ ಇಂಜೆಕ್ಷನ್ ಪ್ರಯೋಗ- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ಬೇಕಾದ ದಿನವೇ ಮಹಿಳೆ ಸಾವು

ಚಿತ್ರದುರ್ಗ: ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಯ ಮೇಲೆ ಮಾಡಿದ ಅನಗತ್ಯ ಹೆಚ್ಚುವರಿ ಇಂಜೆಕ್ಷನ್ ಪ್ರಯೋಗದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಆರೋಪವೊಂದು ನಗರದಲ್ಲಿ ಕೇಳಿಬಂದಿದೆ.

ಮೃತ ದುರ್ದೈವಿ ಮಹಿಳೆಯನ್ನು ಬುರುಜನಹಟ್ಟಿಯ ನಿಂಗಮ್ಮ(52) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದು ವಾರದಿಂದ ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮಧುಮೇಹದಿಂದ ಬಳಲುತ್ತಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಸುಧಾರಣೆಯಗಿದ್ದು, ಭಾನುವಾರ ಸಂಜೆ ಡಿಸ್ಚಾರ್ಜ್ ಮಾಡಿಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.

ಈ ವೇಳೆ ಅಲ್ಲಿನ ನರ್ಸ್ ಒಬ್ಬರು, ಇದು ಕೊನೆಯ ಇಂಜೆಕ್ಷನ್ ಅಂತ ಅನಗತ್ಯ ಹೆಚ್ಚುವರಿಯಾಗಿ ಪ್ರಾಯೋಗಿಕ ಇಂಜೆಕ್ಷನ್ ನೀಡಿದ್ದಾರೆ. ಆ ಬಳಿಕ ನಿಂಗಮ್ಮ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಆಗ ವೈದ್ಯರಾದ ಸ್ವಾಮಿಯವರು ಸಹ ಸ್ಥಳದಲ್ಲಿಲ್ಲದೇ ತೋರಿದ ನಿರ್ಲಕ್ಷ್ಯ ಹಾಗೂ ಪ್ರಾಯೋಗಿಕವಾಗಿ ಇಂಜೆಕ್ಷನ್ ನೀಡಿದಾಗ ಮುಂದಾಗುವ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸಹ ಆಸ್ಪತ್ರೆ ನಿರ್ಲಕ್ಷ್ಯ ತೋರಿದ ಪರಿಣಾಮ ನಮ್ಮ ತಾಯಿಯ ಸಾವನ್ನಪ್ಪಿದ್ದಾರೆಂದು ಮೃತರ ಮಕ್ಕಳು ಹಾಗೂ ಸಂಬಂಧಿಗಳೆಲ್ಲರೂ ಆರೋಪಿಸಿದ್ದಾರೆ.

ಸಂಪೂರ್ಣ ಗುಣಮುಖರಾಗಿದ್ದ ಮಹಿಳೆಯನ್ನು ಮನೆಗೆ ಕಳುಹಿಸಿದರೆ ಆಸ್ಪತ್ರೆಗೆ ಬರುವ ಲಾಭ ಕಡಿಮೆಯಾಗುತ್ತದೆ ಎಂಬ ಉಪಾಯದಿಂದ ಈ ರೀತಿ ಅನಾವಶ್ಯಕ ಇಂಜೆಕ್ಷನ್ ನೀಡಲಾಗಿದೆ ಎಂದು ಆರೋಪಿಸಿದಾಗ ಆಸ್ಪತ್ರೆ ಆಡಳಿತ ಮಂಡಳಿ ಉಸ್ತುವಾರಿಗಳು ಮೌನ ವಹಿಸಿದ್ದರು.

ಆಸ್ಪತ್ರೆ ಆವರಣದೊಳಗೆ ಮೃತರ ಸಂಬಂಧಿಗಳು, ಸ್ನೇಹಿತರೆಲ್ಲರು ಒಟ್ಟಾಗಿ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಮಹಿಳೆಯ ಸಾವಿಗೆ ನ್ಯಾಯ ಒದಗಿಸಬೇಕು. ಅಮಾಯಕರ ಸಾವಿಗೆ ಕಾರಣರಾದ ಈ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಪ್ರಕರಣ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪರಿಸ್ಥಿತಿಯನ್ನು ಶಾಂತಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Comments

Leave a Reply

Your email address will not be published. Required fields are marked *