ಮಾನಸಿಕ ಅಸ್ವಸ್ಥನಿಂದ ಬೇಸತ್ತ ಮಹಿಳೆಯರು- ಮರ್ಯಾದೆಗೆ ಅಂಜಿ ಮಗನನ್ನ ಕೊಂದ ತಂದೆ

– ದೊಣ್ಣೆಯಿಂದ ಹೊಡೆದ್ರೂ ಸಾಯಲಿಲ್ಲ, ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ

ಚಿತ್ರದುರ್ಗ: ಮಕ್ಕಳಿಲ್ಲ ಅಂತ ಕಂಡ ಕಂಡ ದೇವರಿಗೆ ಹರಕೆ ಕಟ್ಟಿಕೊಂಡಿದನ್ನ ಕೇಳಿದ್ದೇವೆ. ಆದರೆ ಕಳೆದ ಎಂಟುವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದ ಮಗನಿಂದ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರಿಗೆ ಕಿರಕುಳ ಆಗುತ್ತಿದೆ ಅಂತ ತಿಳಿದ ತಂದೆಯೇ ಮಗನ ತಲೆಗೆ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದಿರುವ ಕೃತ್ಯ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆಗ್ರಾಮದಲ್ಲಿ ನಡೆದಿದೆ.

ಜಾಲಿಕಟ್ಟೆ ಗ್ರಾಮದ ನಾಗರಾಜ್ ಹಾಗೂ ನೀಲಮ್ಮ ದಂಪತಿಯ ಪುತ್ರ ಸುನಿಲ್ (24) ಕೊಲೆಯಾದ ದುರ್ದೈವಿ. ಸುನಿಲ್ ಪ್ರತಿನಿತ್ಯ ಗ್ರಾಮದ ಮಹಿಳೆಯರು ಹಾಗೂ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅಷ್ಟೇ ಅಲ್ಲದೆ ಗ್ರಾಮಸ್ಥರ ಮನೆಗಳಿಗೆ ನುಗ್ಗಿ ದಾಂದಲೆ ಎಬ್ಬಿಸುತ್ತಿದ್ದ. ಆತನ ಕಿರುಕುಳಕ್ಕೆ ಗ್ರಾಮಸ್ಥರು ಸಹ ಬೇಸತ್ತಿದ್ದರು. ಅದರಂತೆ ಶನಿವಾರ ಸಂಜೆ ಸಹ ಸುನಿಲ್ ಗ್ರಾಮದ ಕೆಲವರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದ. ಹೀಗಾಗಿ ಆಕ್ರೋಶಗೊಂಡ ಗ್ರಾಮಸ್ಥರು ಸುನಿಲ್‍ನ ಕಿರುಕುಳಕ್ಕೆ ಬ್ರೇಕ್ ಹಾಕುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದರು. ಅಲ್ಲದೇ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಆಗ್ರಹಿಸಿದ್ದರು. ಒಂದು ವೇಳೆ ಆತನ ಕಿರುಕುಳ ಹೀಗೆ ಮುಂದುವರಿದೆರೆ ಗ್ರಾಮಸ್ಥರೇ ಹಣ ಸಂಗ್ರಹಿಸಿ ಚಿಕಿತ್ಸೆಕೊಡಿಸುವುದಾಗಿ ಸಹ ತಿಳಿಸಿದ್ದರು.

ಗ್ರಾಮಸ್ಥರು ಮಾತುಗಳು ಹಾಗೂ ಮಗನ ಸ್ಥಿತಿಯಿಂದ ಆಕ್ರೋಶಗೊಂಡ ಸುನಿಲ್ ತಂದೆ ನಾಗರಾಜ್ ಶನಿವಾರ ರಾತ್ರಿ ಮಗನನ್ನು ದೊಣ್ಣೆಯಿಂದ ತಲೆಗೆ ಹೊಡೆದು ಕೊಲ್ಲಲು ಯತ್ನಿಸಿದ್ದ. ಆದರೆ ಮಗ ಸಾವನ್ನಪ್ಪದ ಹಿನ್ನೆಲೆಯಲ್ಲಿ ಕುತ್ತಿಗೆಗೆ ಹಗ್ಗ ಹಾಕಿ ಉಸಿರುಗಟ್ಟಿಸಿ ಕೊಂದಿದ್ದಾನೆಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಎಸ್‍ಪಿ ರಾಧಿಕಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಈಗಾಗಲೇ ಆರೋಪಿ ನಾಗರಾಜ್‍ನನ್ನು ಬಂಧಿಸಿದ್ದಾರೆ. ಆದರೆ ಈ ಕೃತ್ಯವನ್ನು ಎಸಗಲು ಇನ್ನೂ ಅನೇಕರು ಸಾಥ್ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಎಸ್ಪಿ ರಾಧಿಕಾ ಅವರು, ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಕೃತ್ಯದಲ್ಲಿ ಬೇರೆ ಯಾರಾದರು ಭಾಗಿಯಾಗಿದ್ದರೆ ಅವರನ್ನು ಸಹ ಸಾಕ್ಷ್ಯಾಧಾರಗಳ ಸಹಿತ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *