ಕೂಲಿ ಮಾಡಿ ತಮ್ಮನ್ನು ವಾಣಿಜ್ಯ ತೆರಿಗೆ ಆಯುಕ್ತರಾಗುವಂತೆ ಮಾಡಿದ ತಾಯಿಗೆ ಸಾಧನೆ ಅರ್ಪಿಸಿದ ಮಗ

ಚಿತ್ರದುರ್ಗ: ಬಡತನ ಅನ್ನೋದು ಹೊಟ್ಟೆಗೆ ಮಾತ್ರ ಗೊತ್ತು ಜ್ಞಾನಕ್ಕಲ್ಲ ಎಂಬಂತೆ ಕಿತ್ತುತಿನ್ನುವ ಬಡತನದ ನಡುವೆ ಓದಲೇಬೆಕೆಂಬ ಹಂಬಲದಿಂದ ಕಷ್ಡಪಟ್ಟು ಓದುತ್ತಿದ್ದ ಯುವಕ ಇಂದು ವಾಣಿಜ್ಯ ತೆರಿಗೆ ಆಯುಕ್ತರಾಗಿದ್ದಾರೆ. ಕೂಲಿ ಮಾಡಿ ತಮ್ಮನ್ನು ಓದಿಸಿದ ತಾಯಿಗೆ ತಮ್ಮ ಸಾಧನೆಯನ್ನು ಮಗ ಅರ್ಪಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಂದ್ರೆಹಳ್ಳಿ ಕುಗ್ರಾಮದ ಡಿ.ಕೆ ಮುದ್ದಪ್ಪ ಮತ್ತು ಪುಟ್ಟರಂಗಮ್ಮ ಇವರ ತೃತೀಯ ಪುತ್ರನಾದ ಎಂ. ರಂಗನಾಥ್ ಜಿಲ್ಲೆಯ ವಾಣಿತ್ಯ ತೆರಿಗೆ ಆಯುಕ್ತರಾಗಿದ್ದಾರೆ. ಅವರು ತಮ್ಮ ತಾಯಿ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡಿ ಗಳಿಸಿದ ಹಣದಿಂದಲೇ ಶ್ರಮವಹಿಸಿ ಓದುವ ಮೂಲಕ ಇಂದು ವಾಣಿಜ್ಯ ತೆರಿಗೆ ಆಯುಕ್ತರಾಗಿ ಸಾಧನೆ ಮಾಡಿದ್ದಾರೆ.

ರಂಗನಾಥ್ ಬಾಲ್ಯದಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ಹೀಗಾಗಿ ತಾಯಿಯ ಆಶ್ರಯದಲ್ಲಿ ಬೆಳೆದು ಗುರುವಿನ ಮಾರ್ಗದರ್ಶನದ ಮೂಲಕ ತನ್ನ ಸಾಧನೆಯನ್ನು ಸಾಧಿಸಿ ತೋರಿಸಿದ್ದಾರೆ. ರಂಗನಾಥ್ ಅವರಿಗೆ ಇಬ್ಬರು ಅಣ್ಣಂದಿರಿದ್ದು, ಬಡತನ ಎಂಬ ಪಿಡುಗು ಸದಾ ಇವರನ್ನು ಕಾಡುತ್ತಿತ್ತು. ಹೀಗಾಗಿ ಒಂದನೇ ತರಗತಿಯನ್ನ ಪಕ್ಕದ ಗ್ರಾಮವಾದ ಮಸ್ಕಲ್‍ನ ಸರ್ಕಾರಿ ಶಾಲೆಯಲ್ಲಿ ಕಲಿತರು. ನಂತರ ಎರಡರಿಂದ ನಾಲ್ಕನೇ ತರಗತಿಯವರೆಗೆ ಜಡೆಗೊಂಡನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಓದಿದರು. ಮುಂದಿನ ಕಲಿಕೆಯನ್ನ ಹೇಮದಳ ಶಾಲೆ ಹಾಗೂ ಪಿಯುಸಿ ವಿದ್ಯಾಭ್ಯಾಸವನ್ನು ಹಿರಿಯೂರಿನ ಜೂನಿಯರ್ ಕಾಲೇಜ್‍ನಲ್ಲಿ ಪಡೆದರು. ಬಳಿಕ ಚಿತ್ರದುರ್ಗದ ವೆಂಕಟೇಶ್ವರ ಕಾಲೇಜ್‍ನಲ್ಲಿ ದ್ವಿತೀಯ ಬಿಎ ಓದುತ್ತಿರುವಾಗ ಸೈನಿಕ ಹುದ್ದೆಗೆ ಆಯ್ಕೆಯಾದರು. ದೇಶ ಸೇವೆ ಮಾಡುವುದರ ಜೊತೆಗೆ ಓದುವ ಅಭ್ಯಾಸವನ್ನ ರಂಗನಾಥ್ ಕೈಬಿಡಲಿಲ್ಲ. ಹೀಗಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದೂರಶಿಕ್ಷಣದ ಮೂಲಕ ಅಂತಿಮ ವರ್ಷದ ಪದವಿಯನ್ನು ಮುಕ್ತಾಯಗೊಳಿಸಿದರು.

ಸೈನಿಕ ವೃತ್ತಿಯಲ್ಲಿದ್ದುಕೊಂಡು ತನ್ನ ಓದಿನ ಹವ್ಯಾಸವನ್ನು ಮುಂದುವರಿಸಿದ ರಂಗನಾಥ್ ಎಂ.ಎ ಸೋಶಿಯಾಲಜಿಯನ್ನ ದೂರ ಶಿಕ್ಷಣದ ಮೂಲಕ ಪಡೆದರು. ಹಾಗೆಯೇ 2015ನೇ ಬ್ಯಾಚಿನ 2017ನೇ ಸಾಲಿನಲ್ಲಿ ಕೆಪಿಎಸ್‍ಸಿ ಪರೀಕ್ಷೆ ಬರೆಯುವ ಮೂಲಕ ಮೊದಲ ಹಂತದಲ್ಲೇ ಎಲ್ಲಾ ವಿಷಯದಲ್ಲಿ ಉತ್ತೀರ್ಣರಾಗಿ ಇಂದು ವಾಣಿಜ್ಯ ತೆರಿಗೆ ಆಯುಕ್ತರಾಗಿ ಹೊರಹೊಮ್ಮಿದ್ದಾರೆ.

ಬಡತನದಲ್ಲೂ ಸಾಧಿಸುವ ಛಲ ಹಾಗೂ ತಂದೆಯನ್ನು ಕಳೆದುಕೊಂಡ ನೋವಿನ ನಡುವೆಯೇ ಓದುವ ಛಲವನ್ನು ಬಿಡದೆ ಸಾಧಿಸಿದ ರಂಗನಾಥ್, ಅಂದು ನನ್ನ ತಾಯಿ ಬೇರೆಯವರ ಹೊಲದಲ್ಲಿ ಕೂಲಿನಾಲಿ ಮಾಡಿಕೊಂಡು ಬಂದು ನನ್ನನ್ನು ಓದಿಸಿದರು. ತಾಯಿಯ ಸತತ ಕಷ್ಟದ ಪ್ರಯತ್ನಕ್ಕೆ ಇಂದು ಫಲಸಿಕ್ಕಿದ್ದು, ಬದುಕು ಸಾರ್ಥಕ ಎನಿಸಿದೆ. ಕಠಿಣ ಪ್ರಯತ್ನದ ಹಿಂದೆ ನಾವಿರಬೇಕು ಆಗ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿಂದ ಓದಿದ್ದಕ್ಕೆ ಇಂದು ನಾನು ವಾಣಿಜ್ಯ ತೆರಿಗೆ ಆಯುಕ್ತರಾಗಿದ್ದೇನೆ ಎಂದರು. ಈ ಸಂತೋಷವನ್ನು ಹಾಗೂ ಸಾಧನೆಯನ್ನು ರಂಗನಾಥ್ ಅವರ ತಾಯಿ ಮತ್ತು ಗುರುವಾದ ಈಶ್ವರಪ್ಪನವರಿಗೆ ಅರ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *