ದೊಡ್ಡಣ್ಣ ಅಳಿಯ ವೀರೇಂದ್ರ ಮನೆಯಲ್ಲಿ ಕಳ್ಳತನ ಎಸಗಿದ್ದ ಮೂವರು ಅರೆಸ್ಟ್

ಚಿತ್ರದುರ್ಗ: ಉದ್ಯಮಿ ಹಾಗೂ ಚಿತ್ರನಟ ದೊಡ್ಡಣ್ಣನ ಅಳಿಯ ಕೆ.ಸಿ.ವೀರೇಂದ್ರ ಹಾಗೂ ಅವರ ಸಹೋದರ ತಿಪ್ಪೇಸ್ವಾಮಿ ಅವರ ಮನೆಯನ್ನು ದೋಚಿದ್ದ ಓರ್ವ ಬಾಲಾಪರಾಧಿ ಸೇರಿದಂತೆ ನಾಲ್ವರು ಚೋರರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್, ರಾಕೇಶ್, ಸ್ವರೂಪ್ ಬಂಧಿತ ಆರೋಪಿಗಳು. ಚಳ್ಳಕೆರೆ ಸಿಪಿಐ ತಿಮ್ಮಣ್ಣ ನೇತೃತ್ವದ ತಂಡ ನಾಲ್ಕು ದಿನಗಳಲ್ಲಿ ಈ ಪ್ರಕರಣ ಬೇಧಿಸಿದ್ದು, ಬಂಧಿತರಿಂದ 17 ಕೆಜಿ ಚಿನ್ನದ ಬಿಸ್ಕೆಟ್ ಹಾಗೂ 10 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಕೆ.ಸಿ.ವೀರೇಂದ್ರ ಹಾಗೂ ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ 21 ಕೆಜಿ ಚಿನ್ನ ಹಾಗೂ 10 ಲಕ್ಷದ 70 ಸಾವಿರ ಹಣ ಲಪಟಾಯಿಸಿದ್ದರು. ಈ ಸಂಬಂಧ ಮೂರು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತ ಆರೋಪಿಗಳ ಪೈಕಿ ಮಂಜುನಾಥ್ ವೀರೇಂದ್ರ ಅವರ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಕದ್ದ ಚಿನ್ನದ ಗಟ್ಟಿಗಳನ್ನು ಮಹಾರಾಷ್ಟ್ರ, ಆಂಧ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಮಂಜುನಾಥ್ ಹಾಗೂ ರಾಕೇಶ್ ಪೊಲೀಸರನ್ನು ನೋಡಿ ಚಳ್ಳಕೆರೆಯಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ನಡುವೆ ಆರೋಪಿ ಮಂಜುನಾಥ್ ಮೋಜಿಗಾಗಿ ಕಳ್ಳತನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಷಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *