– ವಿರೋಧದ ನಡುವೆಯೂ ಚಾನ್ಸ್ ಕೊಟ್ಟೆ ಮೂರು ಬಾರಿ ಗೆದ್ದರು
ಚಿತ್ರದುರ್ಗ: ಪ್ರಯತ್ನ ಮಾಡಲೆಂದು ಚಾಮರಾಜನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಟಿಕೆಟ್ ಕೊಟ್ಟಿದ್ದೆ. ಅವರು ಪ್ರಬಲ ಸ್ಪರ್ಧೆ ನೀಡುತ್ತ ಮೂರು ಬಾರಿ ಆಯ್ಕೆಯಾಗಿದ್ದಾರೆ. ಸಚಿವರು ಹ್ಯಾಟ್ರಿಕ್ ಹೀರೋ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೊಗಳಿದ್ದಾರೆ.
ಜಿಲ್ಲೆಯ ಹೊಸದುರ್ಗದಲ್ಲಿ ನಡೆದ ಅಖಿಲ ಭಾರತ ಭಗೀರಥ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಉಪ್ಪಾರ ಸಮುದಾಯಕ್ಕೆ ಪುಟ್ಟರಂಗಶೆಟ್ಟಿ ಒಬ್ಬರೇ ಶಾಸಕರು. ಅಷ್ಟೇ ಅಲ್ಲದೆ ಹಠಕ್ಕೆ ಬಿದ್ದು ಅವರಿಗೆ ಸಚಿವ ಸ್ಥಾನ ನೀಡಿದ್ದೇನೆ. ಈ ಮೂಲಕ ಸ್ವತಂತ್ರ ಭಾರತದಲ್ಲಿ ಉಪ್ಪಾರ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಟ್ಟವನು ನಾನೇ ಎಂದು ಹೇಳಿದರು.

ಪುಟ್ಟರಂಗಶೆಟ್ಟಿ ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸ್ವಾಮೀಜಿಗಳು ಮಠಕ್ಕೆ ಹಣ ಬಿಡುಗಡೆ ಮಾಡಿಲ್ಲವೆಂದು ಹೇಳಿದ್ದಾರೆ. ಈ ಕುರಿತು ಪುಟ್ಟರಂಗಶೆಟ್ಟಿ ಅವರ ಜೊತೆಗೆ ಮಾತನಾಡಿ ಧೈರ್ಯವಾಗಿ ಮಠಕ್ಕೆ ಹಣ ಬಿಡುಗಡೆ ಮಾಡುವಂತೆ ಸಲಹೆ ನೀಡಿದ್ದೇನೆ ಎಂದು ಮಾಜಿ ಸಿಎಂ ತಿಳಿಸಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಪರ ಪ್ರಚಾರಕ್ಕಾಗಿ ಹುಬ್ಬಳ್ಳಿ ಬರುತ್ತಿದ್ದಾರೆ. ನಾವು ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಲು ಸಿದ್ಧತೆ ನಡೆಸಿದ್ದೇವೆ. ಪ್ರಧಾನಿ ಮೋದಿ ಅವರ ಸರ್ಕಾರವನ್ನು ಹೇಗೆ ಅಧಿಕಾರದಿಂದ ಕೆಳಗೆ ಇಳಿಸಬೇಕು ಅಂತ ನಮಗೆ ಗೊತ್ತಿದೆ ಎಂದು ಕುಟುಕಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರದ ಹುಚ್ಚು ಹಿಡಿದಿದೆ. ಆಡಿಯೋ ಬಾಂಬ್ ಮೂಲಕ ಅವರು ಏನು ಅಂತ ಜನರಿಗೆ ಈಗ ಅರ್ಥವಾಯಿತು. ಸಂವಿಧಾನಬದ್ಧ ಸಮ್ಮಿಶ್ರ ಸರ್ಕಾರವನ್ನು ಕಿತ್ತೆಸೆಯಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply