ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

-ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಅಕ್ರಮ ದಂಧೆ

ಚಿತ್ರದುರ್ಗ: ವೈದ್ಯೋ ನಾರಾಯಣೋ ಹರಿ ಅಂತಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ದೊಡ್ಡ ಅಕ್ರಮ ದಂಧೆ ನಡೆಯುತ್ತಿದೆ.

ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯ ಆಯುಷ್ ಡಾಕ್ಟರ್ ಎ.ಎನ್ ಸುರೇಶ್ ಎಂಬ ಆಸಾಮಿ, ಹಣಕ್ಕಾಗಿ ತಾನೊಬ್ಬ ವೈದ್ಯ ಅನ್ನೋದನ್ನೇ ಮರೆತು ಕ್ಯಾನ್ಸರ್ ರೋಗಿಗಳಿಗೆ ಪಾರಂಪರಿಕಚಿಕಿತ್ಸೆ ಕೊಡುತ್ತೇವೆ ಎಂದು ಅವರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ. ಕುಣಿಗಲ್‍ನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೆಸರಲ್ಲಿ ಖಾಸಗಿ ವಾಹಿನಿಗಳಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ತಾ, ಕ್ಯಾನ್ಸರ್ ರೋಗಿಗಳನ್ನು ಚಿತ್ರದುರ್ಗದ ಯೋಗಾವನ ಬೆಟ್ಟಕ್ಕೆ ಸೆಳೆಯುತ್ತಾನೆ. ಅಲ್ಲದೇ ಇವರ ಅಕ್ರಮ ಬಯಲಾಗದಿರಲಿ ಎಂದು ನಕಲಿ ಖಾವಿಧಾರಿಗಳ ಬೆಂಗಾವಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇಲ್ಲಸಲ್ಲದ ಚಿಕಿತ್ಸೆ ನೀಡುತ್ತಿದ್ದಾನೆ ಆರೋಪಗಳು ಕೇಳಿ ಬಂದಿವೆ.

ಯೋಗದಿಂದ ಕ್ಯಾನ್ಸರ್ ಗುಣಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳೋ ಈ ದಂಧೆಕೋರರ ಮಾತಿಗೆ ಮರುಳಾದ ಹುಬ್ಬಳ್ಳಿ ಮೂಲದ ಬಾಲರಾಜ್ ಕುಮಾರ್ ಎಂಬ ರೋಗಿಯಿಂದ 30 ಸಾವಿರ ರೂಪಾಯಿ ಹಣ ಪಡೆದು, ಆರು ತಿಂಗಳಿಂದ ಅಲ್ಲೇ ಉಳಿದರೂ ರೋಗ ಗುಣವಾಗದೇ ಆತ ಸಾವಿನಂಚಿಗೆ ತಲುಪಿದ್ದಾನೆ. ಈ ಬಗ್ಗೆ ಕೇಳಲು ಬಂದಿದ್ದ ಬಾಲರಾಜ್ ಕುಟುಂಬದ ಮೇಲೆ ಡಾಕ್ಟರ್ ಸುರೇಶನ ಚೇಲಗಳು ದೌರ್ಜನ್ಯವೆಸಗಲು ಮುಂದಾಗಿದ್ದರು. ಆಗ ಆಕ್ರೋಶಗೊಂಡ ಕ್ಯಾನ್ಸರ್ ರೋಗಿ ಅಲ್ಲಿನ ನಕಲಿ ಖಾವಿಧಾರಿಗಳಿಗೆ ಭರ್ಜರಿ ಗೂಸಕೊಟ್ಟು ತನ್ನ ಕೋಪವನ್ನು ಈಡೇರಿಸಿಕೊಂಡಿದ್ದಾನೆ.

ಈ ಅಕ್ರಮ ಸುಮಾರು ನಾಲ್ಕು ವರ್ಷಗಳಿಂದ ನಡೆಯುತಿದ್ದರೂ ಸಹ ಆರೋಗ್ಯ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇನ್ನಾದರೂ ಆರೋಗ್ಯ ಸಚಿವರು ಈ ಅಕ್ರಮಕ್ಕೆ ಹಾಕುತ್ತಾರ ಬ್ರೇಕ್ ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *