ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಣೆ- ನಾಲ್ವರು ಅಂದರ್

ಚಿತ್ರದುರ್ಗ: ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲೇ ಇಂತಹ ಕೃತ್ಯ ನಡೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಂಬುಲೆನ್ಸ್ ಚಾಲಕ ಸುಬಾನ್, ಲ್ಯಾಬ್ ಟೆಕ್ನಿಶಿಯನ್ ಸಂತೋಷ್, ಶಿವಗಂಗಾ ಗ್ರಾಮದ ಜೀವನ್ ಹಾಗೂ ಗಿರೀಶ್ ಬಂಧಿತರು. ಆರೋಪಿಗಳು ಮದ್ಯವನ್ನುಅಂಬುಲೆನ್ಸ್‌ನಿಂದ ಓಮಿನಿ ವ್ಯಾನ್‍ಗೆ ಶಿಫ್ಟ್ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಿಎಸ್‍ಐ ಮಂಜುನಾಥ ಸಿದ್ದಪ್ಪ ಕುರಿ ಅವರು, ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ನಮ್ಮ ಸಿಬ್ಬಂದಿಯೊಂದಿಗೆ ಶಿವಗಂಗ ಗ್ರಾಮದ ಬಳಿ ಗಸ್ತು ತಿರುಗುತ್ತಿದ್ದೇವು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 13 ರಸ್ತೆಯ ಪಕ್ಕದಲ್ಲಿ ಒಂದು ಸರ್ಕಾರಿ ಅಂಬುಲೆನ್ಸ್ ಹಾಗೂ ಒಂದು ಓಮಿನಿ ಅನುಮಾನಸ್ಪದವಾಗಿ ನಿಂತಿತ್ತು. ಹೀಗಾಗಿ ಅಲ್ಲಿಗೆ ಹೋಗಿ ನೋಡಿದಾಗ ಮದ್ಯ ತುಂಬಿದ ಬಾಕ್ಸ್ ಗಳನ್ನು ಓಮಿನಿ ವಾಹನಕ್ಕೆ ತುಂಬುತ್ತಿರುವುದು ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.

ಆರೋಪಿಗಳಾದ ಸುಬಾನ್ ಹಾಗೂ ಸಂತೋಷ್ ಹೆಚ್.ಡಿ.ಪುರ ಪ್ರಾಥಾಮಿಕ ಆರೋಗ್ಯ ಕೇಂದ್ರದ ಅಂಬುಲೆನ್ಸ್‌ನಲ್ಲಿ ಮದ್ಯವನ್ನು ಚಿತ್ರಹಳ್ಳಿ ಗ್ರಾಮಕ್ಕೆ ತಂದಿದ್ದರು. ಬಳಿಕ ಜೀವನ್, ಗಿರೀಶ್ ಜೊತೆ ಸೇರಿ ಅಂಬುಲೆನ್ಸ್‌ನಿಂದ ಓಮಿನಿ ವ್ಯಾನ್‍ಗೆ ಶಿಫ್ಟ್ ಮಾಡುತ್ತಿದ್ದರು ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಸಾಗಿಸುತ್ತಿದ್ದ ಅಂದಾಜು 60,614 ರೂ ಮೌಲ್ಯದ 180 ಎಂಎಲ್‍ನ 48 ಬ್ಯಾಕ್‍ಪೈಪರ್ ಡಿಲಕ್ಸ್ ವಿಸ್ಕಿ ಪೌಚ್‍ಗಳು ಇರುವ 14 ಬಾಕ್ಸ್, ಕೆಎ-16, ಜಿ-591 ನೋಂದಣಿಯ ಅಂಬುಲೆನ್ಸ್ ಹಾಗೂ ಕೆಎ-51, ಎಂಎಲ್-7603 ನಂಬರಿನ ಓಮಿನಿ ಕಾರನ್ನು ಪೊಲೀಸರು ವಶಕ್ಕೆ ಪಡೆಕೊಂಡಿದ್ದಾರೆ. ಈ ಕುರಿತು ಚಿತ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *