ಅಂಧನಾಗಿ ಶತ್ರುಗಳನ್ನು `ಸಂಹಾರ’ ಮಾಡಲಿದ್ದಾರೆ ಚಿರಂಜೀವಿ ಸರ್ಜಾ

ಬೆಂಗಳೂರು: ಚಂದನವನದಲ್ಲಿ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾಗಳು ತಯಾರಾಗುತ್ತಿವೆ. ಅಂತೆಯೇ ಗುರು ದೇಶಪಾಂಡೆ ನಿರ್ದೇಶನದ `ಸಂಹಾರ’ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅಂಧನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಮಿತ್ರಾ `ರಾಗಾ’ ಸಿನಿಮಾದಲ್ಲಿ ಕುರುಡರಾಗಿ ನಟಿಸಿದ್ದರು. ನಮ್ಮ ಪ್ರೀತಿಯ ರಾಮು ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಡರಾಗಿ ನಟಿಸಿ ಅನೇಕ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದರು. ಈಗ ಚಿರಂಜೀವಿ ಅಂಧ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಲ್ಲಿ ಅಂಧ ವ್ಯಕ್ತಿ ತನ್ನ ಸೇಡನ್ನು ಹೇಗೆ ತೀರಿಸಿಕೊಳ್ಳುತ್ತಾನೆ. ಆತನ ಜೀವನ ಶೈಲಿ, ತನ್ನದೇ ಆದ ರೆಸ್ಟೋರೆಂಟ್ ನಿರ್ವಹಣೆ ಮಾಡುವ ಚಾಕಚಕ್ಯತೆ ಎಲ್ಲವನ್ನೂ ನಾವು ಸಂಹಾರ ಸಿನಿಮಾದಲ್ಲಿ ಕಾಣಬಹುದಾಗಿದೆ.

ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಉಗ್ರಂ ಖ್ಯಾತಿಯ ನೀರ್ ದೋಸೆ ಬೆಡೆಗಿ ಹರಿಪ್ರಿಯಾ ಜೊತೆಯಾಗಿದ್ದಾರೆ. ಚಿಕ್ಕಣ್ಣ ಪೊಲೀಸ್ ಪಾತ್ರದಲ್ಲಿ, ಕಾವ್ಯಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವನ್ನ ಚಿತ್ರತಂಡ ಹೊಂದಿದೆ. ಸಂಹಾರ ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿದ್ದು, ರವಿವರ್ಮ ಸಾಹಸ ಸಂಯೋಜನೆಯನ್ನು ಹೊಂದಿದೆ. ಸಿನಿಮಾ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಈ ಹಿಂದೆ ಬಾಲಿವುಡ್ ನಲ್ಲಿ `ಕಾಬಿಲ್’ ಚಿತ್ರದಲ್ಲಿ ಹೃತಿಕ್ ರೋಷನ್ ಅಂಧನಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಹೃತಿಕ್ ತನ್ನ ಪತ್ನಿಯ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆಯನ್ನು ಹೊಂದಿತ್ತು. `ಫನಾ’ ಚಿತ್ರದಲ್ಲಿಯೂ ಕಾಜೋಲ್ ಅಂಧ ಯುವತಿಯಾಗಿ ನಟಿಸಿ ಅಪಾರ ಪ್ರಮಾಣದಲ್ಲಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು. ಮಲೆಯಾಳಂನ `ಒಪ್ಪಂ’ ಸಿನಿಮಾದಲ್ಲಿ ಮೋಹನ್ ಲಾಲ್ ಅಂಧರಾಗಿ ನಟಿಸಿದ್ದರು.

Comments

Leave a Reply

Your email address will not be published. Required fields are marked *