ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ಸೇರಿ ನಾಲ್ವರಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stampede) ಬಂಧನಕ್ಕೆ ಒಳಗಾಗಿದ್ದ ಆರ್‌ಸಿಬಿ ಫ್ರಾಂಚೈಸಿಯ ಮಾರ್ಕೆಟಿಂಗ್ ಹೆಡ್‌ ನಿಖಿಲ್ ಸೋಸಲೆ ಹಾಗೂ ಡಿಎನ್‌ಎ ಈವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆಯ ಸುನೀಲ್ ಮ್ಯಾಥ್ಯೂಗೆ ಹೈಕೋರ್ಟ್‌ (Karnataka High Court) ಜಾಮೀನು ಮಂಜೂರು ಮಾಡಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾ. ಕೃಷ್ಣಕುಮಾರ್‌ ಅವರಿದ್ದ ಪೀಠ ನಿಖಿಲ್‌ ಸೋಸಲೆ, ಸುನೀಲ್‌ ಮ್ಯಾಥ್ಯೂ, ಕಿರಣ್, ಶಮಂತ್ ಎಲ್ಲರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಅಲ್ಲದೇ ದೇಶ ಬಿಟ್ಟು ಹೋಗದಂತೆ ಷರತ್ತು ವಿಧಿಸಿದೆ. ಅರ್ಜಿದಾರರ ಪರ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿದರು.

ಹೈಕೋರ್ಟ್‌ನಲ್ಲಿ (High Court) ಪತಿ ನಿಖಿಲ್‌ ಸೋಸಲೆ ಅಕ್ರಮ ಬಂಧನ ಪ್ರಶ್ನಿಸಿ ಪತ್ನಿ ಮಾಳವಿಕಾ ನಾಯ್ಕ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಆದ್ರೆ ಎಜಿ ಶಶಿಕಿರಣ್‌ ಶೆಟ್ಟಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ ಕಾಲ್ತುಳಿತ ದುರಂತಕ್ಕೆ ಆರ್‌ಸಿಬಿಯೇ ನೇರಹೊಣೆ. ಎಕ್ಸ್‌ ಖಾತೆಯ ಪೋಸ್ಟ್‌ನಲ್ಲಿ ವಿಕ್ಟರಿ ಪರೇಡ್‌, ಉಚಿತ ಪಾಸ್ ಅಂತೆಲ್ಲಾ ಹೇಳಿತ್ತು. ಇದರಿಂದ 3-4 ಲಕ್ಷ ಜನ ಸೇರಿದ್ದರು ಅಂತ ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್‌ ಇಂದಿಗೆ ಆದೇಶ ಕಾಯ್ದಿರಿಸಿತ್ತು.