KSCA ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌ ಮಧ್ಯಂತರ ಆದೇಶ

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾದ ಪ್ರಕರಣದಲ್ಲಿ ಕೆಎಸ್‌ಸಿಎಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್‌ ಏಕಸದಸ್ಯ ಪೀಠವು ಶುಕ್ರವಾರ ಮಧ್ಯಂತರ ಆದೇಶ ಹೊರಡಿಸಿದೆ.

ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕೆಎಸ್‌ಸಿಎ ಆಡಳಿತ ಮಂಡಳಿ ಮತ್ತು ಅದರ ಉನ್ನತ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧಿಕಾರಿಗಳಿಗೆ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್‌ ಅನುಮತಿ ನೀಡಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರು, ಕೆಎಸ್‌ಸಿಎ ಆಡಳಿತ ಮಂಡಳಿಯ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ. ಶಂಕರ್ ಮತ್ತು ಖಜಾಂಚಿ ಇ.ಎಸ್.ಜೈರಾಮ್ ಅವರಿಗೆ ಮಧ್ಯಂತರ ಪರಿಹಾರ ನೀಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದ್ದಾರೆ.

ಹಕ್ಕುಗಳು ಮತ್ತು ವಾದಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಅರ್ಜಿದಾರರು ನಡೆಯುತ್ತಿರುವ ತನಿಖೆ, ವಿಚಾರಣೆ, ಆಯೋಗ ಇತ್ಯಾದಿಗಳಿಗೆ ಸಹಕರಿಸಬೇಕು ಎಂದು ಕೋರ್ಟ್‌ ತಿಳಿಸಿದೆ.

ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಶಶಿ ಕಿರಣ್, ತನಿಖೆ ಮುಂದುವರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ, ಅರ್ಜಿದಾರರ ಪರ ವಕೀಲರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾರ್ಕೆಟಿಂಗ್ ಮುಖ್ಯಸ್ಥರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಕೋರ್ಟ್‌ ಗಮನ ಸೆಳೆದರು. ‘ಒಬ್ಬ ಆರೋಪಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಆತ ದುಬೈಗೆ ಹೋಗುತ್ತಿದ್ದ’ ಎಂದು ಎಜಿ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಕೆಎಸ್‌ಸಿಎ ಪ್ರತಿನಿಧಿಗಳಿಗೆ ಬಂಧನದಿಂದ ರಕ್ಷಣೆ ನೀಡಿದೆ. ಪ್ರಕರಣವನ್ನು ರದ್ದುಗೊಳಿಸುವ ಅರ್ಜಿಯ ಮುಂದಿನ ವಿಚಾರಣೆ ಜೂನ್ 16 ರಂದು ನಡೆಯಲಿದೆ.